
ತುಮಕೂರು, ಆ. ೨೫- ಜಿಲ್ಲೆಯಲ್ಲಿರುವ ಕಾರ್ಪೋರೇಟ್ ಕಂಪೆನಿಗಳಿಂದ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ (ಸಿಎಸ್‌ಆರ್) ಸುಮಾರು ೩೫ ಕೋಟಿ ರೂ. ಹಣ ಲಭ್ಯವಾಗಲಿದ್ದು, ಇದನ್ನು ಶಾಲೆ ಹಾಗೂ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ್ ಹೇಳಿದರು. ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಪ್ರಮುಖ ಕೈಗಾರಿಕೆಗಳ ಪ್ರಮುಖರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಪ್ರಮುಖ ೩೫ ಉದ್ಯಮ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದು, ಸಿಎಸ್‌ಆರ್ ಅನುದಾನ ನೀಡುವ ಭರವಸೆ ಕೊಟ್ಟಿದ್ದಾರೆ. ಇದರಿಂದ ಸುಮಾರು ೩೫ ಕೋಟಿ ರೂ. ಹಣ ಲಭ್ಯವಾಗಲಿದೆ ಎಂದರು.
ಈ ಮೊತ್ತ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಳವಾಗಲಿದ್ದು, ಪೂರ್ಣ ಹಣವನ್ನು ಶಿಕ್ಷಣ, ಆರೋಗ್ಯ ಸೇವೆ ಸುಧಾರಣೆಗೆ ಬಳಕೆ ಮಾಡಲಾಗುವುದು. ಜಿಲ್ಲೆಯಲ್ಲಿ ೪ ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿದ್ದು, ೨.೫೦ ಲಕ್ಷ ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಶಾಲಾ ಕೊಠಡಿ, ಗ್ರಂಥಾಲಯ, ಪ್ರಯೋಗಾಲಯ ಸೇರಿದಂತೆ ಸಾಕಷ್ಟು ಕೆಲಸಗಳು ಆಗಬೇಕಿದೆ. ಸಿಎಸ್‌ಆರ್ ನಿಧಿಯನ್ನು ಬಳಸಿಕೊಂಡು ಗುಣಮಟ್ಟದ ಶಾಲೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದರು.
ವಸಂತನರಸಾಪುರ ಕೈಗಾರಿಕಾ ಪ್ರದೇಶದ ನಾಲ್ಕನೇ ಹಂತದ ಕಾಮಗಾರಿಯನ್ನು ಹತ್ತು ದಿನಗಳಲ್ಲಿ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಕೆಐಎಡಿಬಿ, ಕೈಗಾರಿಕಾ ಇಲಾಖೆ, ಭೂಸ್ವಾಧೀನ ಅಧಿಕಾರಿಗೆ ಸೂಚನೆ ನೀಡಲಾಗಿದೆ. ಮುಂಬೈ? ಚೆನ್ನೈ ಕೈಗಾರಿಕಾ ಕಾರಿಡಾರ್ ವ್ಯಾಪ್ತಿಯಲ್ಲಿ ವಸಂತನರಸಾಪುರ ಪ್ರದೇಶವನ್ನು ?ಕೈಗಾರಿಕಾ ಹಬ್? ಮಾಡಲು ಉದ್ದೇಶಿಸಲಾಗಿದೆ. ನಾಲ್ಕನೇ ಹಂತದ ಯೋಜನೆಗೆ ೧,೭೨೨ ಎಕರೆ ಭೂಸ್ವಾಧೀನ ಮಾಡಿಕೊಂಡು, ೯೪೮ ಕೋಟಿಗೆ ನಿರ್ಮಾಣ ಗುತ್ತಿಗೆಯನ್ನು ಎಲ್ ಅಂಡ್ ಟಿ ಕಂಪೆನಿಗೆ ಆರು ತಿಂಗಳ ಹಿಂದೆ ನೀಡಲಾಗಿದೆ. ಆದರೆ ಈವರೆಗೂ ಕೆಲಸ ಆರಂಭವಾಗಿಲ್ಲ. ತಕ್ಷಣ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದು ಹೇಳಿದರು. ವಸಂತನರಸಾಪುರ ಭಾಗದಲ್ಲಿ ೧೬ ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಅದರಲ್ಲಿ ಈವರೆಗೆ ೮,೪೮೪ ಎಕರೆ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ೧೨೦ ರಿಂದ ೧೩೦ ಕೈಗಾರಿಕೆಗಳು ಸ್ಥಾಪನೆಯಾಗಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕೈಗಾರಿಕೆಗಳು ಬರಲಿವೆ. ರಸ್ತೆ, ನೀರು, ವಿದ್ಯುತ್ ಸೇರಿದಂತೆ ಕೆಲವು ಬೇಡಿಕೆಗಳನ್ನು ಉದ್ಯಮಿಗಳು ನಮ್ಮ ಮುಂದಿಟ್ಟಿದ್ದಾರೆ. ಆ ಬಗ್ಗೆಯೂ ಗಮನಹರಿಸಿ ಕ್ರಮ ವಹಿಸಲಾಗುವುದು ಎಂದರು.