ಸಂಜೆವಾಣಿ ವಾರ್ತೆ
ದಾವಣಗೆರೆ; ಜು. ೨೧ :ಹಿರಿಯೂರಿನಲ್ಲಿನ ಕೇಂದ್ರ ಸರ್ಕಾರದ ನವರತ್ನಗಳೊಂದಾದ ಪವರ್‍ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಕಂಪನಿಯ ಸಿಎಸ್‍ಆರ್ ನಿಧಿಯಡಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನಲ್ಲಿ ರಸ್ತೆ ಕಾಮಗಾರಿಯನ್ನು ಕೈಗೊಳ್ಳಲು ಕಂಪನಿಯ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿ ಶಿವಾನಂದ ಕಾಪಶಿಯವರು ಯೋಜನೆ ಒಡಂಬಡಿಕೆಗೆ ಜುಲೈ 20 ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪತ್ರಕ್ಕೆ ಜಂಟಿಯಾಗಿ ಸಹಿ ಹಾಕಲಾಯಿತು.ಕಂಪನಿಯ ಸಿಎಸ್‍ಆರ್ ನಿಧಿಯಡಿ ಚನ್ನಗಿರಿ ತಾಲ್ಲೂಕಿನ ಗೆದ್ಲೆಹಟ್ಟಿಯಿಂದ ಮಂಗೇನಹಳ್ಳಿ ವರೆಗೆ ರಸ್ತೆ ನಿರ್ಮಾಣ, ಹಳ್ಳಕ್ಕೆ ಸೇತುವೆ, ಬಸ್ ನಿಲ್ದಾಣ ಸೇರಿದಂತೆ ಇನ್ನಿತರೆ ಕಾಮಗಾರಿ ಕೈಗೊಳ್ಳಲು ರೂ.2.40 ಕೋಟಿ ಮೊತ್ತದ ಕಾಮಗಾರಿ ಕೈಗೊಳ್ಳಲು ಕಂಪನಿಯೊಂದಿಗೆ ಒಡಂಬಡಿಕೆಯನ್ನು ಜಿಲ್ಲಾ ಆಡಳಿತದಿಂದ ಮಾಡಿಕೊಳ್ಳಲಾಯಿತು.ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮಾತನಾಡಿ ಪವರ್‍ಗ್ರಿಡ್ ಕಂಪನಿಯ ಸಿಎಸ್‍ಆರ್ ನಿಧಿಯಡಿ ಕಾಮಗಾರಿ ಕೈಗೊಳ್ಳಲು ಇದು ಎರಡನೇ ಒಡಂಬಡಿಕೆಯಾಗಿದ್ದು ಈಗಾಗಲೇ ಚಿಗಟೇರಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಯಂತ್ರಗಳನ್ನು ಅಳವಡಿಸಲು 3.87 ಕೋಟಿ ಮೊತ್ತಕ್ಕೆ ಅನುಮೋದನೆ ನೀಡಿದ್ದು ಕೆಲವೇ ದಿನಗಳಲ್ಲಿ ಚಿಗಟೇರಿ ಆಸ್ಪತ್ರೆಗೆ ಆಧುನಿಕ ಯಂತ್ರಗಳು ತಲುಪಲಿವೆ. ಇದರಲ್ಲಿ ಡಯಾಲೀಸಿಸ್ ಘಟಕದ ಸಾಮಥ್ರ್ಯವು ಹೆಚ್ಚಲಿದೆ. ಚಿಗಟೇರಿ ಆಸ್ಪತ್ರೆ 300 ಹಾಸಿಗೆಯುಳ್ಳ ಆಸ್ಪತ್ರೆಯಾಗಿದ್ದು ಇಲ್ಲಿ 700 ಕ್ಕೂ ಹೆಚ್ಚು ಹಾಸಿಗೆಯ ಚಿಕಿತ್ಸಾ ಸೌಲಭ್ಯವನ್ನು ಕಲ್ಪಿಸಲಾಗಿದೆ. ಜಿಲ್ಲಾ ಆಸ್ಪತ್ರೆಗೆ ಹೆಚ್ಚು ಜನರು ಬರುತ್ತಿದ್ದು ಮುಂದಿನ ದಿನಗಳಲ್ಲಿ ಇಲ್ಲಿನ ಒತ್ತಡವನ್ನು ಕಡಿಮೆ ಮಾಡಲು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಾಮಥ್ರ್ಯವನ್ನು ಹೆಚ್ಚಿಸುವ ಮೂಲಕ ಇಲ್ಲಿನ ಒತ್ತಡ ಕಡಿಮೆ ಮಾಡಲು ಅಗತ್ಯ ಯೋಜನೆ ರೂಪಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪವರ್ ಗ್ರಿಡ್ ಕಂಪನಿಯ ಸಿಎಸ್‍ಆರ್ ನಿಧಿಯ ನಿರ್ದೇಶಕರಾದ ಕೆ.ಎನ್.ಓಂಕಾರಪ್ಪ ಮಾತನಾಡಿ ನಗರ ಒಡಂಬಡಿಕೆಯನ್ವಯ ಚಿಗಟೇರಿ ಆಸ್ಪತ್ರೆಗೆ ರೂ.3.87 ಕೋಟಿಯಷ್ಟು ಅತ್ಯಾಧುನಿಕ ಯಂತ್ರಗಳನ್ನು ನೀಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಕಂಪನಿಯ ಸಿಎಸ್‍ಆರ್ ನಿಧಿಯಡಿ ಅಭಿವೃದ್ದಿ ಮಾಡಲು ರಸ್ತೆ ಕಾಮಗಾರಿ ತೆಗೆದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಕಂಪನಿಯಿಂದ ಆರೋಗ್ಯ ಕ್ಷೇತ್ರÀ ಸುಧಾರಣೆ, ಆಸ್ಪತ್ರೆಗಳಲ್ಲಿ ದಿನದ 24 ಗಂಟೆಗಳಲ್ಲಿಯು ಬಿಸಿ ನೀರು, ಲೈಟಿಂಗ್ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆಯಲ್ಲದೆ ಕಂಪನಿಯಿಂದ ಪ್ರತಿ ವರ್ಷ ರೂ.50 ಕೋಟಿ ಸಿಎಸ್‍ಆರ್ ನಿಧಿಯಡಿ ಪಡೆಯಬೇಕೆಂಬ ಉದ್ದೇಶ ಹೊಂದಲಾಗಿದೆ ಎಂದರು.ಕಂಪನಿಯ ಜನರಲ್ ಮ್ಯಾನೇಜರ್ ಹರೀಶ್‍ಕುಮಾರ್ ನಾಯರ್ ಕಂಪನಿ ಪರವಾಗಿ ಒಡಂಬಡಿಕೆಗೆ ಸಹಿ ಹಾಕಿದರು.