ಸಿಎಂ ಹೇಳಿಕೆ ಹಿಂದೆ ತಂತ್ರಗಾರಿಕೆ: ಸಿದ್ದು ವ್ಯಂಗ್ಯ

ಬೆಂಗಳೂರು, ಜೂ.8- ವರಿಷ್ಠರು ಸೂಚಿಸಿದ ತಕ್ಷಣ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬಿ.ಎಸ್.ಯಡಿಯೂರಪ್ಪ ನೀಡಿರುವ ಹೇಳಿಕೆಯ‌‌ ಹಿಂದೆ ತಂತ್ರಗಾರಿಕೆಯ ಭಾಗ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ‌‌ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಮುಖ್ಯಮಂತ್ರಿಗಳ ಹೇಳಿಕೆ ಬಗ್ಗೆ ರಾಜ್ಯ ರಾಜಕಾರಣದಲ್ಲಿ ‌ನಾನಾ ರೀತಿಯ ವಿದ್ಯಮಾನಗಳಿಗೆ ಎಡೆಮಾಡಿಕೊಟ್ಟಿರುವ ಹೊತ್ತಿನಲ್ಲೇ ಸಿದ್ದರಾಮಯ್ಯ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇಣುಕಾಚಾರ್ಯ ಅವರು ಶಾಸಕರಿಂದ ಸಂಗ್ರಹ ಮಾಡಿಸುತ್ತಿದ್ದಾರೆ. ಇನ್ನೊಂದು ಕಡೆ ತಮಗೆ ಬೆದರಿಸುವ ಶಕ್ತಿ ಇದೆ ಎಂದು ಪ್ರದರ್ಶಿಸಲು ಹೊರಟಿದ್ದಾರೆ ಎಂದು ತಿಳಿಸಿದರು.
ಬಿಜೆಪಿಯಲ್ಲಿ ನಡೆಯುತ್ತಿರುವ ವಿದ್ಯಮಾನ ಗಮನಿಸಿದರೆ, ನೀನು ಚಿವುಟಿದಂತೆ ಮಾಡು ನಾನು ಅತ್ತಂತೆ ಮಾಡುವ ಮೂಲಕ ದೊಡ್ಡ ನಾಟಕ ನಡೆಯುತ್ತಿದೆ ಎಂದು ಲೇವಡಿ ಮಾಡಿದರು.
ಯಡಿಯೂರಪ್ಪನವರು ದುರ್ಬಲ ಮುಖ್ಯಮಂತ್ರಿ ಹೀಗಾಗಿ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಚರ್ಚೆಗಳು ಮೊದಲಿನಿಂದಲೂ ನಡೆಯುತ್ತಿದೆ ಎಂಬ ಹೇಳಿಕೆಯನ್ನು ಸಿದ್ದರಾಮಯ್ಯ ಮತ್ತೊಮ್ಮೆ ಸಮರ್ಥಿಸಿಕೊಂಡರು.