ಸಿಎಂ ಹುದ್ದೆ ಚರ್ಚೆ ಬೇಡ

ಬೆಂಗಳೂರು, ಏ.೧೧-ಚುನಾವಣೆ ಮುಗಿಯುವವರೆಗೂ ಕಾಂಗ್ರೆಸ್‌ನಲ್ಲಿ ಯಾರು ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಬಗ್ಗೆ ಮಾತನಾಡದೆ ಇರುವುದು ಒಳ್ಳೆಯದು, ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ನಗರದಲ್ಲಿಂದು ಬೆಂಗಳೂರು ಪ್ರೆಸ್‌ಕ್ಲಬ್ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಜನರು ಹಾಗೂ ಪಕ್ಷದ ಹಿತ ದೃಷ್ಟಿಯಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯಾರು ಸಿಎಂ ಆಗಬೇಕು ಎಂಬ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಲಿದೆ.ಹೀಗಾಗಿ
ಯಾರು ಸಿಎಂ ಆಗಬೇಕು ಎಂಬ ಹೇಳಿಕೆಯನ್ನು ಸಿದ್ದರಾಮಯ್ಯ ಡಿಕೆಶಿ ನೀಡದಿದ್ದರೆ ಜನರಿಗೆ ಕಾಂಗ್ರೆಸ್ ಬಗ್ಗೆ ಇನ್ನು ವಿಶ್ವಾಸ ಹೆಚ್ಚಾಗುತ್ತೆ ಹಾಗೂ ಇದರಿಂದ ಪಕ್ಷಕ್ಕೆ ಅನುಕೂಲವಾಗಲಿದೆ ಎಂದರು.
ಕಾಂಗ್ರೆಸ್‌ನಲ್ಲಿ ಆರು ತಿಂಗಳು ಮೊದಲೇ ಅಭ್ಯರ್ಥಿ ಘೋಷಣೆ ಮಾಡಬೇಕು ಎಂಬ ಒತ್ತಡ ಇತ್ತು.ಇದರಿಂದ ಕ್ಷೇತ್ರದಲ್ಲಿ ಪ್ರಚಾರಕ್ಕೆ ಅನುಕೂಲ ಆಗುತ್ತಿತ್ತು. ಆದರೆ ಬಿಜೆಪಿ ಪಟ್ಟಿ ಇನ್ನೂ ಬಿಡುಗಡೆ ಆಗಿಲ್ಲ. ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆ ಆದಾಗ ಸ್ವಲ್ಪ ಗೊಂದಲ ಆಗಿತ್ತು ನಿಜ, ಆದರೆ ಬಿಜೆಪಿ ಪಟ್ಟಿ ಬಿಡುಗಡೆ ಆದಾಗ ಅದರ ಹತ್ತರಷ್ಟು ಗೊಂದಲ ಸೃಷ್ಟಿ ಆಗುತ್ತೆ ಎಂದು ಭವಿಷ್ಯ ನುಡಿದರು.
ಬಿಜೆಪಿ ಚುನಾವಣೆಗಾಗಿ ಹಿಂದುತ್ವ ಬಳಕೆ ಮಾಡಿದೆ. ಆದರೆ ನಾವೇ ನಿಜವಾದ ಹಿಂದೂಗಳು.ಕೇವಲ ಗೋ ಹತ್ಯೆ ನಿಷೇಧ ಮಾತ್ರ ಅಲ್ಲ, ಪ್ರಾಣಿ ಹತ್ಯೆಯನ್ನೇ ನಿಷೇಧ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಮೂಲೆಗೆ ಕೂರಿಸಿರುವುದು ತಪ್ಪು ಸಂದೇಶ ರವಾನೆ ಮಾಡಿದಂತಾಗಿದೆ. ಯಡಿಯೂರಪ್ಪ ಜಾತಿಗೆ ಸೀಮಿತವಾದ ನಾಯಕ ಆಗಿರಲಿಲ್ಲ. ಈಗ ಯಡಿಯೂರಪ್ಪ ಅವರನ್ನು ಸೈಡ್ ಲೈನ್ ಕಾಂಗ್ರೆಸ್‌ಗೆ ಅನು ಕೂಲವಾಗಿದೆ ಎಂದು ಅವರು ಟೀಕಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್‌ಗೆ ಅನುಕೂಲಕರ ವಾತಾವರಣ ಇದೆ.ನಾವು ಮಾಡಿದ ಕೆಲಸ ಕಾರ್ಯಗಳು ನಮಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿ ಮಾಡಿದೆ. ಕಳೆದ ಚುನಾವಣೆಯಲ್ಲಿ ಟಿಪ್ಪು, ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರವಾಗಿ ಅಪಪ್ರಚಾರದಿಂದ ಸೋಲಾಯಿತು ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ದೇಶದ ಸಾಲದ ಪ್ರಮಾಣವೂ ಹೆಚ್ಚಾಗಿದೆ. ಕೇಂದ್ರದ ನಾಯಕತ್ವದ ವಿರುದ್ಧ ಜನ ಭ್ರಮನಿರಸರಾಗಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ನಾಯಕತ್ವವೇ ಇಲ್ಲ ಎಂದ ಅವರು ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿಎಂ ಆಗುವ ಎಲ್ಲಾ ಅರ್ಹತೆ ನನಗಿದೆ..!
ಸಿಎಂ ಆಗುವ ಎಲ್ಲ ಅರ್ಹತೆ ನನಗಿದೆ. ಆದರೆ ಸಿಎಂ ಸ್ಥಾನಕ್ಕೆ ಇನ್ನೂ ಇಬ್ಬರು ಮೂವರು ಆಕಾಂಕ್ಷಿಗಳು ಇದ್ದಾರೆ. ಇಂತಹ ಸಂದರ್ಭಗಳಲ್ಲಿ ನಾನು ಸಿಎಂ ಸ್ಥಾನ ಕೇಳಲು ಸಾಧ್ಯವಿಲ್ಲ. ನಾನು ಸಿಎಂ ರೇಸ್ ನಲ್ಲಿ ಇಲ್ಲ. ಫ್ರಂಟ್ ಲೈನ್ ನಲ್ಲಿ ಇರುವವರ ಪೈಕಿ ಯಾರಾದರೊಬ್ಬರು ಆಗ್ತಾರೆ ಎಂದು ರಾಮಲಿಂಗಾರೆಡ್ಡಿ ನುಡಿದರು.