ಸಿಎಂ ಹುದ್ದೆ ಖಾಲಿ ಇಲ್ಲ, ಬದಲಾವಣೆಯು ಇಲ್ಲ

ದಾವಣಗೆರೆ,ಜ.7: ಈಗಂತೂ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಇನ್ನೂ ಎರಡೂವರೆ ವರ್ಷ ಬಿಎಸ್ ಯಡಿಯೂರಪ್ಪನವರೇ ಸಿಎಂ ಆಗಿರ್ತಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದರು.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪರ ನೇತೃತ್ವದಲ್ಲಿಯೇ ಸರ್ಕಾರ ಮುನ್ನಡೆಯಲಿದ್ದು, ಪಕ್ಷ ಸಂಘಟನೆಯು ಅವರ ನೇತೃತ್ವದಲ್ಲಿಯೇ ನಡೆಯಲಿದೆ. ಸಧ್ಯ ಅಂತೂ ಸಿಎಂ ಬದಲಾವಣೆ ಇಲ್ಲ ಎಂದು ಹೇಳಿದರು.ಮೊನ್ನೆ ಸಿಎಂ ಬಿಎಸ್‌ವೈ ನಡೆಸಿದ ಸಭೆಯಲ್ಲಿ ಯಾವುದೇ ಅಸಮಾಧಾನ, ಅಪಸ್ವರವನ್ನು ಯಾವ ಶಾಸಕರು ಎತ್ತಿಲ್ಲ. ಸಭೆಯಲ್ಲಿ ಭಾಗವಹಿಸಿದ್ದ 180 ಜನ ಶಾಸಕರು ತಮ್ಮ ಕ್ಷೇತ್ರಗಳ ಅಭಿವೃದ್ಧಿಗಾಗಿ ಬೇಡಿಕೆ ಸಲ್ಲಿಸಿದ್ದಾರೆ. ಸರ್ಕಾರದ ಹಣಕಾಸಿನ ಸ್ಥಿತಿಗತಿ ನೋಡಿಕೊಂಡು ಅಭಿವೃದ್ಧಿ ಕಾಮಗಾರಿಗೆ ಸಿಎಂ ಹಣ ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಿದರು.ಪ್ರವಾಹ, ಕೋವಿಡ್ ಸಂಕಷ್ಟದ ಕಾರಣಕ್ಕೆ ಶಾಸಕಿರಿಗೆ ನಿರೀಕ್ಷಿತ ಪ್ರಮಾಣದ ಅನುದಾನ ಒದಗಿಸಲಾಗಿಲ್ಲ. ಆದರೆ, ಈ ವರ್ಷ ಶಾಸಕರ ಸಮಸ್ಯೆ ಸರಿದೂಗಿಸುತ್ತೇವೆ ಎಂದರು.ವಲಸಿಗರಿಗೆ ಯಾವುದೇ ರೀತಿಯ ಅನ್ಯಾಯವಾಗೋದಿಲ್ಲ. ಯಡಿಯೂರಪ್ಪನವರು ನ್ಯಾಯ ಕೊಡಿಸುವ ಕೆಲಸ ಮಾಡ್ತಾರೆ ಎಂದ ಅವರು, ಪಕ್ಷದ ವಿರುದ್ಧ ಬಸವನಗೌಡ ಪಾಟೀಲ್ ಯತ್ನಾಳ್ ಮಾತನಾಡುತ್ತಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.