
ಕಲಬುರಗಿ:ಸೆ.6: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಕ್ಷರ ಆವಿಷ್ಕಾರ ಯೋಜನೆಯ ಅಡಿಯಲ್ಲಿ ಅಕ್ಷರ ಮಿತ್ರ ಹೆಸರಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳಲ್ಲಿ ಕೊರತೆ ಇರುವ 2618 ಶಿಕ್ಷಕರ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ನಿಟ್ಟಿನಲ್ಲಿ ಇದೇ ಸೆಪ್ಟೆಂಬರ್ 17ರಂದು ಆದೇಶ ಪತ್ರಗಳನ್ನು ನೀಡಲಾಗುವುದು ಎಂದು ಕೆಕೆಆರ್‍ಡಿಬಿ ಅಧ್ಯಕ್ಷ ಡಾ.ಅಜಯ ಸಿಂಗ್ ತಿಳಿಸಿದರು.
ಕೆಕೆಆರ್‍ಡಿಬಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಏಳು ತಿಂಗಳ ಅವಧಿಗೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತಲಾ ಮಾಸಿಕ ರೂ.10 ಸಾವಿರ ಹಾಗೂ ಹೈಸ್ಕೂಲು ಶಿಕ್ಷಕರಿಗೆ ಮಾಸಿಕ ತಲಾ 10,500 ವೇತನ ನೀಡಲು ಅನುಕೂಲವಾಗುವಂತೆ ರೂ.18.32ಕೋಟಿ ಮೊತ್ತದ ಯೋಜನೆಗೆ ಅಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಕಾರ್ಯಾದೇಶ ಹೊರಡಿಸಲಾಗುವುದು ಎಂದರು.
ಈ ಯೋಜನೆ ಅಡಿ ಈಗಾಗಲೇ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಒಂದುವೇಳೆ ಸೆ.17ರಂದು ಈ ನಿಟ್ಟಿನಲ್ಲಿ ಸಂಪೂರ್ಣ ನೇಮಕಾತಿ ಸಾಧ್ಯವಾಗದೆ ಹೋದಲ್ಲಿ ಸೆ.30ರವರೆಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದರು.
ಕಲ್ಯಾಣ ಕರ್ನಾಟಕ ವಿಭಾಗದ 7 ಜಿಲ್ಲೆಗಳಲ್ಲಿ ಒಟ್ಟು 92149 ಸರ್ಕಾರಿ (ಪ್ರಾಥಮಿಕ ಮತ್ತು ಪ್ರೌಢ) ಶಾಲೆಗಳಿವೆ. ಈ ಶಾಲೆಗಳಲ್ಲಿ ಪ್ರಸ್ತುತ 13,25,183 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸದರಿ ಶಾಲೆಗಳಲ್ಲಿ ಎಲ್ಲಾ ವೃಂದದ 58.136 ಹುದ್ದೆಗಳು ಮಂಜೂರಾಗಿದ್ದು, ಅವುಗಳಲ್ಲಿ ಸಹ ಶಿಕ್ಷಕರ ವಿಷಯವಾರು ಹುದ್ದೆಗಳು 49,439 ಮಂಜೂರಾಗಿವೆ. ಕಲ್ಯಾಣ ಕರ್ನಾಟಕ ವಿಭಾಗದ ಏಳು ಜಿಲ್ಲೆಗಳಲ್ಲಿ ನಿವೃತ್ತಿ, ವರ್ಗಾವಣೆ ಹಾಗೂ ಇನ್ನಿತರ ಕಾರಣಗಳಿಂದ ಖಾಲಿ ಇರುವ ಹುದ್ದೆಗಳು ಕ್ರಮವಾಗಿ, ಪ್ರಾಥಮಿಕ ವಿಭಾಗದ ಶಾಲೆಗಳಲ್ಲಿ 15.429 ಹಾಗೂ ಪ್ರೌಢ ಶಾಲೆಗಳಲ್ಲಿ 2853 ಒಟ್ಟು ವಿಷಯವಾರು ಶಿಕ್ಷಕರ 18,282 ಹುದ್ದೆಗಳು ಖಾಲಿ ಇವೆ. ಇದರಿಂದಾಗಿ ಪ್ರತಿದಿನ ಕಲ್ಯಾಣ ಕರ್ನಾಟಕ ಭಾಗದ ಸರಿಸುಮಾರು 5,11,896 ವಿದ್ಯಾರ್ಥಿಗಳು ಶಿಕ್ಷರೇ ಇಲ್ಲದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಈಗಾಗಲೇ ಸರ್ಕಾರದಿಂದ ಕ್ರಮವಾಗಿ, ಕಲ್ಯಾಣ ಕರ್ನಾಟಕ ವಿಭಾಗದ ಪ್ರಾಥಮಿಕ ಶಾಲೆಗಳಿಗೆ 13,240 ಹಾಗೂ ಪ್ರೌಢ ಶಾಲೆಗಳಿಗೆ 2801 ಶಿಕ್ಷಕರ ಹುದ್ದೆಗಳಿಗೆ ಒಟ್ಟಾರೆಯಾಗಿ 16,041 ಅತಿಥಿ ಶಿಕ್ಷಕರನ್ನು ಮಂಜೂರಿ ಮಾಡಿ ಆದೇಶಿಸಿದೆ. ಅದರಂತೆ ಇಲಾಖೆಯ ಅಧಿಕಾರಿಗಳು ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡಿರುತ್ತಾರೆ. ಈ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡ ನಂತರವೂ ಸಹ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಪ್ರತಿದಿನ ಸುಮಾರು 62,748 ವಿದ್ಯಾರ್ಥಿಗಳು ಶಿಕ್ಷರರೇ ಇಲ್ಲದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ವಿವರಿಸಿದರು.
ಇನ್ನು, ಹೆಚ್ಚುವರಿಯಾಗಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಿಗೆ ಕೊರತೆಯಿರುವ ಕ್ರಮವಾಗಿ, ಪ್ರಾಥಮಿಕ ಶಾಲೆಗಳಿಗೆ 2566 ಹಾಗೂ ಪ್ರೌಢ ಶಾಲೆಗಳಿಗೆ 52, ಒಟ್ಟು 2618 ಶಿಕ್ಷಕರ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ಮಂಜೂರಾತಿ ಆದೇಶ ಕೋರಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಯು ಶಿಕ್ಷಣ ಇಲಾಖೆಯ ಆಯುಕ್ತರಿಂದ ಬೇಡಿಕೆಯ ಪ್ರಸ್ತಾವನೆಯನ್ನು ಇದೇ ತಿಂಗಳು 4 ರಂದು ಸ್ವೀಕರಿಸಿದೆ. ಈ ಬೇಡಿಕೆ ಮನ್ನಿಸಿ, ತಕ್ಷಣವೇ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಯು ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಹೆಚ್ಚುವರಿಯಾಗಿ ಬೇಡಿಕೆ ಇರುವ 2618 ಅತಿಥಿ ಶಿಕ್ಷಕರ ನೇಮಕಾತಿಗೆ ಮಂಜೂರಾತಿ ನೀಡಲಾಗಿದೆ ಎಂದರು.
ವಿನೂತನ ಯೋಜನೆ:
ಅಕ್ಷರ ಮಿತ್ರ ವಿನೂತನ ಯೋಜನೆ ರಾಜ್ಯ ಹಾಗೂ ದೇಶದಲ್ಲಿಯೇ ಮೊಟ್ಟ ಮೊದಲ ಪ್ರಯತ್ನವಾಗಿದೆ. ರಾಜ್ಯದಲ್ಲಿ ಸರ್ಕಾರವು ಅತಿಥಿ ಶಿಕ್ಷಕರನ್ನು ನೀಡಿದ ನಂತರವೂ ಬೆಳಗಾವಿ ವಿಭಾಗದಲ್ಲಿ 3132, ಮೈಸೂರು ವಿಭಾಗದಲ್ಲಿ 1110 ಹಾಗೂ ಬೆಂಗಳೂರು ವಿಭಾಗದಲ್ಲಿ 1021 ಶಿಕ್ಷಕರುಗಳ ಕೊರತೆ ಮುಂದುವರೆದಿದೆ. ಕಲ್ಯಾಣ ಕರ್ನಾಟಕ ವಿಭಾಗದ ಜಿಲ್ಲೆಗಳ ಐದು ವರ್ಷದ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಅವಲೋಕಿಸಿದಾಗ ರಾಜ್ಯದಲ್ಲಿ ನಮ್ಮ ಜಿಲ್ಲೆಗಳು ಕಳಪೆ ಪ್ರದರ್ಶನ ನೀಡಿರುವುದು ಕಂಡು ಬರುತ್ತದೆ. 2023ನೇ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ಕಲಬುರಗಿ 28ನೇ ಸ್ಥಾನ, ರಾಯಚೂರು 30ನೇ ಸ್ಥಾನ, ಬಳ್ಳಾರಿ 32ನೇ ಸ್ಥಾನ, ಬೀದರ 34ನೇ ಸ್ಥಾನ ಹಾಗೂ ಯಾದಗಿರಿ ಜಿಲ್ಲೆಯ ರಾಜ್ಯದ ಕೊನೆಯ ಸ್ಥಾನ ಪಡೆದಿದೆ. ಹಾಗಾಗಿ, ಈ ಯೋಜನೆಯಿಂದ ನಾವು ಟಾಪ್ ಟೆನ್ ಸ್ಥಾನಕ್ಕೆ ಏರುವ ವಿಶ್ವಾಸವಿದೆ ಎಂದರು.
ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್, ಕೆಕೆಆರ್‍ಡಿಬಿ ಕಾರ್ಯದರ್ಶಿ ಅನಿರುದ್ಧ ಶ್ರವಣ್, ಶಿಕ್ಷಣ ಇಲಾಖೆಯ ಆಯುಕ್ತ ಡಾ.ಆಕಾಶ್ ಶಂಕರ್ ಇದ್ದರು.
ದೇಶದ ಹೆಸರಿನಲ್ಲಿ ರಾಜಕಾರಣ ಬೇಡ
ನಾವೆಲ್ಲಾ ಇಂಡಿಯನ್ಸ್ ಮತ್ತು ಭಾರತೀಯರು ಎಂದು ಗುರುತಿಸಿಕೊಳ್ಳುತ್ತೇವೆ. ಹೀಗಿರುವಾಗ, ದೇಶದ ಹೆಸರು ಭಾರತ ಎಂದು ಬದಲಾಯಿಸುವ ಮೂಲಕ ಕೇಂದ್ರ ಸರಕಾರ ಅನಗತ್ಯವಾಗಿ ರಾಜಕಾರಣ ಮಾಡುತ್ತಿದೆ ಎಂದು ಶಾಸಕ ಹಾಗೂ ಕೆಕೆಆರ್‍ಡಿಬಿ ಅಧ್ಯಕ್ಷ ಡಾ.ಅಜಯ್‍ಸಿಂಗ್ ಟೀಕಿಸಿದರು.
ಇದುವರೆಗೆ ಪ್ರೆಸಿಡೆಂಟ್ ಆಫ್ ಇಂಡಿಯಾ ಎಂದೇ ಉಲ್ಲೇಖಿಸುತ್ತಾ ಬರಲಾಗಿದೆ. ಅದನ್ನು ಬದಲಾವಣೆ ಮಾಡುವ ಅಗತ್ಯವಿಲ್ಲ. ಪ್ರೆಸಿಡೆಂಟ್ ಆಫ್ ಭಾರತ್ ಎನ್ನುವ ಪದವನ್ನು ಇಲ್ಲಿಯವರೆಗೆ ಎಲ್ಲಿಯೂ ಕೇಳಿಲ್ಲ ಎಂದರು.