ಸಿಎಂ ಸಿದ್ದರಾಮಯ್ಯಗೆ ಬಹಿರಂಗ ಪತ್ರ ವಿಚಾರ ಕೃಷ್ಣ ಭೈರೇಗೌಡ ವಿರುದ್ಧ ತೊಡೆ ತಟ್ಟಿದ ಬಿ.ಆರ್.ಪಾಟೀಲ್

ಕಲಬುರಗಿ,ನ.29: ತಮ್ಮ ವಿರುದ್ಧ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಮಾಡಿರುವ ಆರೋಪಕ್ಕೆ ಕೆಂಡಾಮಂಡಲವಾಗಿರುವ ಆಳಂದ ಶಾಸಕ ಬಿ.ಆರ್.ಪಾಟೀಲ್‍ಇದನ್ನು ವಿರೋಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಸಚಿವರ ವಿರುದ್ಧ ತೊಡೆ ತಟ್ಟಿದ್ದಾರೆ.
ನಿನ್ನೆ ಇಡೀ ದಿನ ಶಾಸಕ ಪಾಟೀಲರ ಪತ್ರ ಮಾಧ್ಯಮಗಳಲ್ಲಿ ಸದ್ದು ಮಾಡಿದ ಬೆನ್ನಲ್ಲೇ ಇಂದು ಬೆಳಗ್ಗೆ ತಾವು ಸಿಎಂಗೆ ಬರೆದಿರುವ ಅಂಶದ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದರು. ಸಚಿವ
ಕೃಷ್ಣ ಭೈರೇಗೌಡ ಅವರು ತಮ್ಮ ವಿರುದ್ಧ ಮಾಡಿರುವ ಆರೋಪದ ಬಗ್ಗೆ ತನಿಖೆಯಾಗಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಉನ್ನತಮಟ್ಟದ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು.
ಸದನಕ್ಕೆ ಹೋಗಲ್ಲ:
ಕೃಷ್ಣ ಭೈರೇಗೌಡ ಅವರು ತಮ್ಮ ವಿರುದ್ಧ ಮಾಡಿರುವ ಆರೋಪದ ಕುರಿತು ಸಮಗ್ರ ತನಿಖೆ ಆಗದ ಹೊರತು ತಾವು ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಸಭಾ ಅಧಿವೇಶನದಲ್ಲಿ ಸಹ ಪಾಲ್ಗೊಳ್ಳುವುದಿಲ್ಲ ಎಂದರು.
ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದರಿಂದಲೇ ಈ ಬಾರಿ ಸಿಎಂಗೆ ಬಹಿರಂಗವಾಗಿ ಪತ್ರ ಬರೆದಿದ್ದೇನೆ. ಕೃಷ್ಣ ಭೈರೇಗೌಡರನ್ನು ಹಾಗೂ ಅಧಿಕಾರಿಗಳನ್ನು ಕರೆಯಿಸಬೇಕು.. ಈ ಬಗ್ಗೆ ತನಿಖೆ ಮಾಡಬೇಕು ಎಂದು ಪಾಟೀಲ್ ತಾಕೀತು ಮಾಡಿದರು.
ಇಷ್ಟು ದಿನ ಎಲ್ಲ ರೀತಿಯ ಅವಮಾನಗಳನ್ನು ಸಹಿಸಿಕೊಂಡಿದ್ದಾಗಿ ಪುನರುಚ್ಚರಿಸಿದ ಅವರು, ಇನ್ನು ಮುಂದೆ ಯಾವುದೇ ಕಾರಣಕ್ಕೂ ಸುಮ್ಮನೆ ಕೂರುವುದಿಲ್ಲ ಎಂದು ಪಟ್ಟು ಹಿಡಿದಂತೆ ಮಾತನಾಡಿದರು.


ಇಂದು ಸಿಎಂ ಸಂಧಾನ ಸಭೆ
ತಾವು ಬರೆದಿರುವ ಪತ್ರದ ಅಂಶಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಂಗಳೂರಿನಲ್ಲಿ ಸಂಧಾನ ಸಭೆ ಕರೆದಿದ್ದಾರೆ. ಸಭೆಯಲ್ಲಿ ತಾವು ಸಹ ಪಾಲ್ಗೊಳ್ಳುತ್ತಿರುವುದಾಗಿ ಶಾಸಕ ಬಿ.ಆರ್.ಪಾಟೀಲ್ ಸ್ಪಷ್ಟಪಡಿಸಿದರು.