ಸಿಎಂ ಸವಾಲು ಸಿದ್ದು ಜವಾಬು


ಬೆಂಗಳೂರು, ಮಾ. ೧೫- ಅಧಿಕಾರ ಕೊಡುವವರು ಜನ, ಅಧಿಕಾರದಿಂದ ಕೆಳಗಿಳಿಸುವವರೂ ಜನರೇ ಎಂಬ ವಿಚಾರ ವಿಧಾನಸಭೆಯಲ್ಲಿಂದು ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಬಜೆಟ್ ಮೇಲಿನ ಚರ್ಚೆ ಸಂದರ್ಭದಲ್ಲಿ ಮಾತನಾಡಿ ಸರ್ಕಾರದ ಬಜೆಟ್ ಬಗ್ಗೆ ಟೀಕೆ-ಟಿಪ್ಪಣಿ ಮಾಡುತ್ತಿದ್ದಾಗ ಮಧ್ಯೆ ಪ್ರವೇಶಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರು ಕೋವಿಡ್‌ನ ಈ ಸಂದರ್ಭದಲ್ಲಿ ನೀವು ನನ್ನ ಜಾಗದಲ್ಲಿದ್ದರೆ ಏನು ಮಾಡುತ್ತಿದ್ದೀರಿ ಹೇಳಿ ನೋಡೋಣ ಎಂದು ಸವಾಲು ಹಾಕಿದಾಗ ಅಷ್ಟೇ ತೀಕ್ಷ್ಣವಾಗಿ ಉತ್ತರ ನೀಡಿದ ಸಿದ್ದರಾಮಯ್ಯ, ನಿಮ್ಮ ಜಾಗ ಬಿಟ್ಟುಕೊಡಿ ನಾನು ಏನು ಮಾಡುತ್ತಿದ್ದೆ ಎಂಬುದನ್ನು ತೋರಿಸುತ್ತಿದ್ದೆ ಎಂದರು.
ಆಗ ಮುಖ್ಯಮಂತ್ರಿ ಯಡಿಯೂರ ಪ್ಪನವರು ಜಾಗ ಬಿಟ್ಟು ಕೊಡುವುದು ನನ್ನ ಕೈಯಲಿಲ್ಲ, ಜನರ ಕೈಯಲ್ಲಿದೆ ಎಂದು ತಿರುಗೇಟು ನೀಡಿದರು.
ನೀವು ಈ ರೀತಿ ಆಡಳಿತ ಮಾಡುತ್ತಿದ್ದರೆ ಜನ ಆ ಸ್ಥಾನ (ಮುಖ್ಯಮಂತ್ರಿ)ವನ್ನು ನನಗೆ ಕೊಡುತ್ತಾರೆ. ಯು ವಿಲ್ ಕಮ್ ಬ್ಯಾಕ್ ಎಗೈನ್ ಎಂದರು.
ಆಗ ಯಡಿಯೂರಪ್ಪನವರು ಜನರಿಗೆ ಎಲ್ಲವೂ ಗೊತ್ತಿದೆ. ಜನರೇ ನಮ್ಮನ್ನು ಇಲ್ಲಿ ಕೂರಿಸಿದ್ದಾರೆ. ಮುಂದೆಯೇ ಇಲ್ಲೇ ಇರುತ್ತೇವೆ ಎಂದು ಹೇಳಿದರು.
ಈ ಹಂತದಲ್ಲಿ ಮಧ್ಯೆ ಪ್ರವೇಶಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ನಾವು ಮಂಡಿಸಿದ ಬಜೆಟ್ ಮೇಲೆ ನೀವು ಮಾತನಾಡುತ್ತಿದ್ದೀರಿ, ಆದಾಯ ಕೊರತೆ ಇದೆ. ಕೋವಿಡ್ ಈ ಜಗತ್ತಿಗೆ ಸಮಸ್ಯೆ ತಂದಿದೆ. ಹಾಗಾಗಿ ರಾಜ್ಯದ ಆದಾರ ಕೊರತೆಯಾಗಿದೆ. ಈ ಹಿಂದೆ ಯಡಿಯೂರಪ್ಪನವರು ೪೩೦೦ ಕೋಟಿ ರೂ. ಹೆಚ್ಚುವರಿ ಆದಾಯ ಬಜೆಟ್ ಮಂಡಿಸಿದ್ದರು. ನೀವು ಮುಖ್ಯಮಂತ್ರಿಯಾದ ಮೇಲೆ ಅದು ೨ ಸಾವಿರ ಕೋಟಿಗೆ ಇಳಿಯಿತು. ಹಾಗಾಗಿ ಜನ ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಸಿದರು ಎಂದು ವಾಗ್ಬಾಣ ಬಿಟ್ಟರು.
ನೀವು ಮುಖ್ಯಮಂತ್ರಿಯಾಗಿದ್ದಾಗ ಆರ್ಥಿಕ ಹಿಂಜರಿತ ಇರಲಿಲ್ಲ, ಕೋವಿಡ್ ಸಮಸ್ಯೆ ಇರಲಿಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಈ ಹಂತದಲ್ಲಿ ಬಸವರಾಜ ಬೊಮ್ಮಾಯಿ ಹಾಗೂ ಸದಸ್ಯ ಕೃಷ್ಣ ಬೈರೇಗೌಡ ನಡುವೆ ರೆವಿನ್ಯೂ ರೆಸಿಪ್ಟ್‌ಗೆ ಸಂಬಂಧಿಸಿದಂತೆ ಮಾತಿನ ಚಕಮಕಿಯೂ ನಡೆಯಿತು.
ಆಗ ಸಿದ್ದರಾಮಯ್ಯನವರು ನಾನು ಮಾತನಾಡಿದ ಮೇಲೆ ನೀವು ಮಾತನಾಡಿ ಎಂದು ಹೇಳಿ, ಈ ಚರ್ಚೆಗೆ ತೆರೆ ಎಳೆದು ತಮ್ಮ ಬಜೆಟ್ ಮೇಲಿನ ಚರ್ಚೆಯನ್ನು ಮುಂದುವರೆಸಿದರು.