ಸಿಎಂ-ಶಾ ಚರ್ಚೆ ಕುತೂಹಲಕ್ಕೆಡೆ

ಬೆಂಗಳೂರಿಗೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದರು.
ಬೆಂಗಳೂರು,ಆ.೪- ಮುಂದಿನ ದಿನಗಳಲ್ಲಿ ಪಕ್ಷ ಹಾಗೂ ಸರ್ಕಾರದ ಮಟ್ಟದಲ್ಲಿ ಮಹತ್ತರ ಬದಲಾವಣೆಯಾಗಲಿದೆ ಎಂಬ ಮಾತುಗಳು ಬಿಜೆಪಿಯಲ್ಲಿ ಕೇಳಿ ಬರುತ್ತಿರುವಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ರಾಜ್ಯಕ್ಕೆ ಭೇಟಿ ನೀಡಿರುವುದು ಕುತೂಹಲ ಕೆರಳಿಸಿದೆ.
ಪೂರ್ವ ನಿಗದಿತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅಮಿತ್ ಶಾರವರು ನಿನ್ನೆ ಮಧ್ಯರಾತ್ರಿ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದು, ಅವರ ರಾಜ್ಯಭೇಟಿ ಹಲವು ರಾಜಕೀಯ ಊಹಾ-ಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.
ಅಮಿತ್ ಶಾರವರ ರಾಜ್ಯ ಭೇಟಿ ಸಂದರ್ಭದಲ್ಲಿ ಮತ್ತೆ ಪಕ್ಷ ಹಾಗೂ ಸರ್ಕಾರದ ಮಟ್ಟದಲ್ಲಿನ ಕೆಲ ಮಹತ್ವದ ಬದಲಾವಣೆ ಚರ್ಚೆಗಳು ಮುನ್ನೆಲೆಗೆ ಬಂದಿದ್ದು, ಸಹಜವಾಗಿ ಇವರ ಭೇಟಿ ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸಿದೆ. ಸಚಿವಾಕಾಂಕ್ಷಿ ಶಾಸಕರಲ್ಲೂ ಸಚಿವ ಸ್ಥಾನಕ್ಕಾಗಿ ಆಸೆಗಳು ಮತ್ತೆ ಗರಿಗೆದರಿವೆ.ಪಕ್ಷ ಹಾಗೂ ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಬದಲಾವಣೆಗಳ ಬಗ್ಗೆ ಅಮಿತ್ ಶಾ ಇಂದು ಮಧ್ಯಾಹ್ನ ಭೋಜನಕೂಟ ಸಂದರ್ಭದಲ್ಲಿ ಪಕ್ಷದ ಕೆಲ ನಾಯಕರ ಜತೆ ಚರ್ಚೆ ನಡೆಸುವ ಸಾಧ್ಯತೆಗಳಿವೆ. ಅಮಿತ್ ಶಾ ಭೇಟಿ ನಂತರ ರಾಜ್ಯರಾಜಕೀಯದಲ್ಲಿ ಕೇಳಿ ಬರುತ್ತಿರುವ ಕೆಲ ಬದಲಾವಣೆಗಳ ಗೊಂದಲಗಳಿಗೆ ತೆರೆ ಬೀಳುವ ಸಾಧ್ಯತೆಗಳು ಇವೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಧಾನಿ ಮೋದಿ ಅವರಿಂದ ಒಂದು ಸಂದೇಶ ತಂದಿದ್ದು, ಈ ಸಂದೇಶವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪಕ್ಷದ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲು ಅವರಿಗೆ ಈ ಸಂದೇಶವನ್ನು ತಲುಪಿಸಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಅಮಿತ್ ಶಾರವರು ಪ್ರಧಾನಿ ಮೋದಿ ಅವರಿಂದ ಹೊತ್ತು ತಂದಿರುವ ಸಂದೇಶ ಏನು ಎಂಬುದು ಕುತೂಹಲ ಮೂಡಿಸಿದೆ.
ನಿನ್ನೆ ಮಧ್ಯರಾತ್ರಿ ರಾಜ್ಯಕ್ಕೆ ಬಂದಿಳಿದ ಅಮಿತ್ ಶಾರವರನ್ನು ಹೆಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್, ಗೃಹ ಸಚಿವ ಅರಗ ಜ್ಞಾನೇಂದ್ರ ಇವರುಗಳು ಬರಮಾಡಿಕೊಂಡಿದ್ದು, ನಗರದ ಖಾಸಗಿ ಹೋಟೆಲ್‌ನಲ್ಲಿ ಅಮಿತ್ ಶಾ ವಾಸ್ತವ್ಯ ಹೂಡಿದ್ದಾರೆ.
ಸಿಎಂ ಭೇಟಿ
ಇಂದು ಬೆಳಿಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಮಿತ್ ಶಾರವರನ್ನು ಖಾಸಗಿ ಹೋಟೆಲ್‌ನಲ್ಲಿ ಭೇಟಿಯಾಗಿ ಸುಮಾರು ಹೊತ್ತು ಚರ್ಚೆ ನಡೆಸಿದರು.ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ನಂತರ ಸರ್ಕಾರ ಕೈಗೊಂಡ ನಿರ್ಧಾರಗಳು, ತನಿಖೆಯ ಪ್ರಗತಿ ಎಲ್ಲವನ್ನೂ ಬೊಮ್ಮಾಯಿ ಅವರು ಅಮಿತ್ ಶಾರವರ ಗಮನಕ್ಕೆ ತಂದು ಅವರಿಗೆ ಸಂಪೂರ್ಣ ವರದಿ ನೀಡಿದರು ಎನ್ನಲಾಗಿದೆ.
ಅಮಿತ್ ಶಾರವರ ಜತೆ ಸುಮಾರು ಅರ್ಧ ತಾಸು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಬ್ಬರೇ ಚರ್ಚೆ ನಡೆಸಿದ್ದು, ಪ್ರಸಕ್ತ ರಾಜಕೀಯ ವಿದ್ಯಮಾನಗಳು, ಪಕ್ಷದ ಆಡಳಿತಕ್ಕೆ ಚುರುಕು ಮುಟ್ಟಿಸುವುದರ ಜತೆಗೆ ಪಕ್ಷ ಸಂಘಟನೆಯ ಬಗ್ಗೆ ಈ ಇಬ್ಬರೂ ನಾಯಕರು ಚರ್ಚೆ ನಡೆಸಿದರು ಎನ್ನಲಾಗಿದೆ. ಇಂದು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅಮಿತ್ ಶಾ, ಇಂದು ಸಂಜೆ ದೆಹಲಿಗೆ ವಾಪಸ್ಸಾಗುವರು.