
ಬೆಂಗಳೂರು, ಸೆ.೮- ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮತ್ತೊಮ್ಮೆ ಬಹಿರಂಗವಾಗಿ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಅವರು, ಡಾ.ಜಿ.ಪರಮೇಶ್ವರ್ ಈ ರಾಜ್ಯದ ಮುಖ್ಯಮಂತ್ರಿ ಆಗುವ ಅರ್ಹತೆ ಹೊಂದಿದ್ದಾರೆ ಎಂದು ಹೇಳುವ ಮೂಲಕ ದಲಿತ ಸಿಎಂ ಚರ್ಚೆಗೆ ಜೀವ ತುಂಬಿದ್ದಾರೆ.
ನಗರದಲ್ಲಿಂದು ಅರಮನೆ ಮೈದಾನದಲ್ಲಿ ಈಡಿಗ ಅಲ್ಲವೆ, ನಾಮಧಾರಿ, ದೀವರು ಮತ್ತು ಅತೀ ಹಿಂದುಳಿದ ವರ್ಗಗಳ ಸಮಾನ ಮನಸ್ಕರ ಪೂರ್ವಭಾವಿ ಸಭೆಯಲ್ಲಿ ಪ್ರಸ್ತಾಪಿಸಿದ ಅವರು, ವಿವಿಧ ಸಮುದಾಯದ ನಾಯಕರು ಈ ರಾಜ್ಯವನ್ನು ಆಳಿದ್ದಾರೆ. ಆದರೆ ದಲಿತ ಸಮುದಾಯಕ್ಕೆ ಇದುವರೆಗೂ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ.ಅದರಲ್ಲೂ ಡಾ.ಜಿ. ಪರಮೇಶ್ವರ್ ಅವರು ಒಂದು ದಶಕಗಳ ಕಾಲ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿದ್ದಾರೆ. ಅವರು ಈ ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ ಎನ್ನುವ ಬಹುದೊಡ್ಡ ನಿರೀಕ್ಷೆ ನಮ್ಮಲ್ಲಿತ್ತು. ಆದರೆ ಅದು ಹುಸಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಪರಮೇಶ್ವರ್ ಅವರು ವಿದೇಶದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯದ ಕಾಂಗ್ರೆಸ್ ಪಕ್ಷಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಯಾರಾದರೂ ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರು ಎಂದರೆ ಮೊದಲನೇ ಸ್ಥಾನದಲ್ಲಿಯೇ ಪರಮೇಶ್ವರ್ ಅವರು ಬರುತ್ತಾರೆ ಎಂದು ಹೇಳಿದರು.ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಪೂರ್ಣ ಪ್ರಮಾಣದಲ್ಲಿ ಮತ ಚಲಾಯಿಸಿ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಈ ಸಮುದಾಯಗಳಿಗೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ. ಅದರಲ್ಲೂ ಈ ಸಮುದಾಯಗಳಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡದೆ ವ್ಯವಸ್ಥಿತವಾಗಿ ದ್ರೋಹ ಬಗೆಯಲಾಗಿದೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಸರ್ಕಾರದಲ್ಲಿ ನಾನು ಮಂತ್ರಿ ಆಗುವ ಭ್ರಮೆ ಇಲ್ಲ.ಆದರೆ, ರಾಜ್ಯಾದ್ಯಂತ ಅತೀ ಹಿಂದುಳಿದ ವರ್ಗಗಳನ್ನು ಸಂಘಟಿಸುವೆ ಎಂದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅತಿಹಿಂದುಳಿದ ಸಮುದಾಯದವರು ಬೆಂಬಲಿಸಿ ಗೆಲ್ಲಿಸಿದ್ದರಿಂದ ಸರಕಾರ ಅಧಿಕಾರಕ್ಕೆ ಬಂದಿದೆ. ಈಗ ಅಧಿಕಾರ ಕೇಳುವ ಹಕ್ಕು ನಮಗಿದೆ. ಎಲ್ಲಾ ಸಮುದಾಯದವರಿಗೂ ಅಧಿಕಾರ ಹಂಚಿಕೆಯಾಗಬೇಕು. ಹಿಂದುಳಿದ ವರ್ಗ ಎಂದರೆ ಈಡಿಗರು ಮಾತ್ರ ಅಲ್ಲ ಉಳಿದ ಚಿಕ್ಕ ಸಮುದಾಯಗಳನ್ನೂ ಜತೆಯಲ್ಲಿ ಕೊಂಡೊಯ್ಯಬೇಕು ಎಂದರು.ಇನ್ನೂ, ನಮ್ಮ ಅಧಿಕಾರ ನಮ್ಮ ಕೈಯಲ್ಲಿದೆ. ಮೇಲ್ಜಾತಿಗಳನ್ನು ದೂಷಿಸಿ ಪ್ರಯೋಜನವಿಲ್ಲ, ನಮ್ಮ ಸಮುದಾಯದ ಜನರು ರಾಜಕೀಯ ಜಾಗೃತಿಯನ್ನು ಬೆಳೆಸಿಕೊಂಡರೆ, ಸಂವಿಧಾನದ ಚೌಕಟ್ಟಿನೊಳಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲಾ ರೀತಿಯ ಪ್ರಯೋಜನಗಳನ್ನು ಪಡೆಯಬಹುದು ಎಂದರು ನುಡಿದರು.ಅಲ್ಪಸಂಖ್ಯಾತರು, ದಲಿತರು ಬದುಕುವುದು ಕಷ್ಟ ಎನ್ನಿಸಿದಾಗ ತೆಗೆದು ಕೊಂಡ ದೊಡ್ಡ ನಿರ್ಧಾರದಿಂದ ಬಿಜೆಪಿ ರಾಜ್ಯದಲ್ಲಿ ಸೋತಿದೆ.
ಈ ತೀರ್ಮಾನವನ್ನು ಸಣ್ಣ ಸಮುದಾಯಗಳೂ ತೆಗೆದುಕೊಳ್ಳಬೇಕು. ಲೋಕಸಭಾ ಚುನಾವಣೆ ಒಳಗಾಗಿ ಶಕ್ತಿ ಪ್ರದರ್ಶನ ಮಾಡಬೇಕು. ಇಲ್ಲವಾದರೆ ಯಾರೂ ಮಾತನಾಡಿಸುವುದಿಲ್ಲ ಎಂದು ತಿಳಿಸಿದರು.