ಸಿಎಂ ವಿರುದ್ಧ ಯತ್ನಾಳ್ ಟೀಕೆ ಮಹತ್ವವಿಲ್ಲ : ಅರುಣ್

ಬೆಳಗಾವಿ, ಏ. ೯- ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಯಲ್ಲಿ ಯಾವುದೇ ಧಮ್ ಇಲ್ಲ, ಅವರ ಹೇಳಿಕೆಗೆ ಮಹತ್ವ ನೀಡುವ ಅಗತ್ಯವಿಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಇಂದಿಲ್ಲಿ ಹೇಳಿದ್ದಾರೆ.
ಅಸಂಬದ್ಧ ಮತ್ತು ಅನಗತ್ಯ ಹೇಳಿಕೆ ನೀಡುತ್ತಿರುವ ಯತ್ನಾಳ್ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಎಷ್ಟುಬಾರಿ ಅಂತ ನೋಟೀಸ್ ಕೊಡುವುದು, ಕ್ರಮ ಕೈಗೊಳ್ಳುವುದು ಎಂದು ಅವರು ಬೇಸರ ವ್ಯಕ್ತಪಡಿಸಿದರು.
ನಿನ್ನೆಯಷ್ಟೆ ಬೆಳಗಾವಿಯಲ್ಲಿ ಮಾತನಾಡಿದ ಯತ್ನಾಳ್ ಅವರು, ಈ ತಿಂಗಳಾಂತ್ಯದಲ್ಲಿ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗಲಿದೆ. ಪಕ್ಷ ಅವಕಾಶ ಮಾಡಿಕೊಟ್ಟರೆ, ಮುಖ್ಯಮಂತ್ರಿಯಾಗುವುದಾಗಿ ಅವರು ಹೇಳಿದರು.
ಬೆಳಗಾವಿ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸರ್ಕಾರದ ವಿರುದ್ಧ ಪ್ರತಿನಿತ್ಯ ಯತ್ನಾಳ್ ಹೇಳಿಕೆ ನೀಡುವುದನ್ನು ಪಕ್ಷ ಸಹಿಸಲ್ಲ ಎಂದು ಅವರು ಹೇಳಿದರು.
ಬೆಳಗಾವಿ ಲೋಕಸಭೆ ಮತ್ತು ಮಸ್ಕಿ ಹಾಗೂ ಬಸವ ಕಲ್ಯಾಣ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ತಮಿಳುನಾಡು ಮತ್ತು ಪುದುಚೆರಿಯಲ್ಲಿ ಎನ್ ಡಿಎ ಮೈತ್ರಿಕೂಟ ಅಧಿಕಾರ ಹಿಡಿಯಲಿದ್ದು, ಕೇರಳ ವಿಧಾನಸಭಾ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.