ಸಿಎಂ ಐಷಾರಾಮಿ ವಿಮಾನ ಪ್ರಯಾಣ: ಬಿಜೆಪಿ ಕಿಡಿ

ಬೆಂಗಳೂರು, ಡಿ. ೨೨- ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರ ಜತೆ ಐಷರಾಮಿ ಖಾಸಗಿ ವಿಮಾನದಲ್ಲಿ ಪ್ರಯಾಣಿಸಿರುವುದಕ್ಕೆ ಬಿಜೆಪಿ ಟೀಕೆ ಮಾಡಿದ್ದು, ರಾಜ್ಯದಲ್ಲಿ ಬರ ಬಂದು ಜನತೆ ಸಂಕಷ್ಟದಲ್ಲಿದ್ದರು ಮಜವಾದಿ ಸಿಎಂ ಸಿದ್ಧರಾಮಯ್ಯ ಮತ್ತು ಅವರ ಆಪ್ತ ಜಮೀರ್ ಅಹಮದ್ ಖಾನ್ ಆಡಂಬರಕ್ಕೇನು ಕಡಿಮೆ ಇಲ್ಲ ಎಂದು ಬಿಜೆಪಿ ಕಿಡಿಕಾರಿದೆ.
ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಸಿದ್ಧರಾಮಯ್ಯ ಅವರ ಜತೆ ದೆಹಲಿಗೆ ಪ್ರಯಾಣಿಸಿದ ವಿಡಿಯೋವನ್ನು ಟ್ವೀಟರ್ ಅಕೌಂಟನ್‌ಲ್ಲಿ ಹಾಕಿಕೊಂಡು ದೆಹಲಿಯಿಂದ ಬೆಂಗಳೂರಿಗೆ ನಮ್ಮ ಹೆಮ್ಮೆಯ ನಾಯಕರ ಜತೆ ವಿಮಾನದಲ್ಲಿ ಪ್ರಯಾಣಿಸಿದ ಸಂತಸದ ಕ್ಷಣಗಳು ಎಂದು ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಬಿಜೆಪಿ, ಮುಖ್ಯಮಂತ್ರಿ ಸಿದ್ಧರಾಮಯ್ಯ, ಜಮೀರ್ ಅಹಮದ್ ಖಾನ್ ವಿರುದ್ಧ ಟ್ವೀಟರ್‌ನಲ್ಲಿ ವಾಗ್ದಾಳಿ ನಡೆಸಿದೆ.
ರಾಜ್ಯದಲ್ಲಿ ತೀವ್ರ ಬರ ಬಂದು ಜನತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನರಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಮುಗಿದರೂ ಒಂದೇ ಒಂದು ಗುಂಡಿ ಮುಚ್ಚುವ ಕಾಮಗಾರಿ ನಡೆದಿಲ್ಲ. ಮಜವಾದಿ ಸಿದ್ಧರಾಮಯ್ಯ ಮ್ತತು ಅವರ ಅತ್ಯಾಪ್ತ ಜಮೀರ್ ಅಹಮದ್ ಖಾನ್ ಅವರ ಆಡಂಬರಕ್ಕೆ ಕಡಿಮೆ ಇಲ್ಲ ಎಂದು ಬಿಜೆಪಿ ಟ್ವೀಟ್ ಮಾಡಿದೆ.ಜನರ ತೆರಿಗೆ ದುಡ್ಡಿನಲ್ಲಿ ಪೈವೇಟ್ ಜೆಟ್ ಒಳಗೆ ಮೋಜು-ಮಸ್ತಿ ಮಾಡುತ್ತಾ ಮಜವಾದಿ ಮುಖ್ಯಮಂತ್ರಿ ನಾಡಿನ ಬಡವರನ್ನು ಅಣಕಿಸುತ್ತಿರುವುದಕ್ಕೆ ಈ ಅವತಾರವೇ ಸಾಕ್ಷಿ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.