ಸಿಎಂ ವಿರುದ್ಧ ದೂರು ಅರುಣ್ ಅಸಮಾಧಾನ

ನವದೆಹಲಿ,ಏ.೧- ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಅವರು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಬಂಡಾಯವೆದ್ದು ಬಹಿರಂಗವಾಗಿ ಲಿಖಿತ ದೂರು ನೀಡಿರುವುದಕ್ಕೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್ ಅಸಮಾಧಾನ ಹೊರ ಹಾಕಿದ್ದಾರೆ.
ನವದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯ ಸಚಿವರಾದ ಈಶ್ವರಪ್ಪ ಅವರು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಹೀಗೆ ಬಹಿರಂಗವಾಗಿ ಪತ್ರ ಬರೆಯಬಾರದಿತ್ತು ಎಂದರು.
ಯಾರಿಗೆ ಏನೇ ಮನಸ್ತಾಪವಿದ್ದರೂ ಸಂಬಂಧಿಸಿದವರ ಜತೆ ಚರ್ಚೆ ನಡೆಸಬೇಕು ಇಲ್ಲವೆ ಪಕ್ಷದ ವೇದಿಕೆಯಲ್ಲಿ ಇಂತಹ ವಿಚಾರಗಳನ್ನು ಪ್ರಸ್ತಾಪಸಬೇಕು ಅದು ಬಿಟ್ಟು ಈಶ್ವರಪ್ಪ ಅವರು ರಾಜ್ಯಪಾಲರಿಗೆ ದೂರು ನೀಡಿ ಪತ್ರ ಬರೆಯಬಾರದಿತ್ತು ಎಂದು ಈಶ್ವರಪ್ಪ ವಿರುದ್ಧ ಹರಿಹಾಯ್ದರು.
ಪಕ್ಷ ಸದ್ಯ ಕರ್ನಾಟಕದ ಉಪಚುನಾವಣೆ ಮೇಲೆ ಗಮನ ಹರಿಸಿದೆ. ಹಾಗೆಯೇ ೫ ರಾಜ್ಯಗಳ ವಿಧಾನಸಭಾ ಚುನಾವಣೆಯತ್ತಲೂ ಗಮನ ಹರಿಸಿದ್ದೇವೆ. ಈ ಚುನಾವಣೆಗಳು ಮುಗಿಯುವವರೆಗೂ ಯಾವುದರ ಬಗ್ಗೆಯೂ ಚರ್ಚೆ ಇಲ್ಲ. ಈಶ್ವರಪ್ಪ ಅವರು ಬರೆದಿರುವ ಪತ್ರದ ಬಗ್ಗೆ ಚುನಾವಣೆಗಳು ಮುಗಿದ ನಂತರವೇ ಚರ್ಚೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ರಮೇಶ್‌ಜಾರಕಿಹೊಳಿ ಅವರ ಬಂಧನಕ್ಕೆ ಕಾಂಗ್ರೆಸ್ ಪಕ್ಷ ಆಗ್ರಹಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಲು ಬಯಸದ ಅವರು, ಜಾರಕಿಹೊಳಿ ಸಿಡಿ ಬಹಿರಂಗದಲ್ಲಿ ಡಿ.ಕೆ ಶಿವಕುಮಾರ್ ಪಾತ್ರವು ಇದೆ ಎನ್ನಲಾಗಿದೆ. ಇದರ ಪರಿಣಾಮ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಲಿದೆ ಎಂದರು.
ಯುವತಿ ದೂರು ಆಧರಿಸಿ ತನಿಖೆ ನಡೆಯುತ್ತಿದೆ. ಮುಂದೆ ಏನಾಗುತ್ತದೆಯೋ ನೋಡೋಣ ತನಿಖಾ ವರದಿ ಬರಲಿ ಅಲ್ಲಿಯವರೆಗೂ ಕಾಯೋಣ ಎಂದರು.
ಕಾಂಗ್ರೆಸ್ ಪಕ್ಷ ಷಡ್ಯಂತರ ನಡೆಸಿಕೊಂಡೆ ಬಂದಿದೆ. ಸಿದ್ದರಾಮಯ್ಯ ಸರ್ಕಾರ ಭ್ರಷ್ಟ ಸರ್ಕಾರವಾಗಿತ್ತು. ಇದನ್ನು ರಾಜ್ಯದ ಜನತೆ ಮರೆತ್ತಿಲ್ಲ ಸುಳ್ಳು ಹೇಳುವುದೇ ಕಾಂಗ್ರೆಸ್‌ನ ಕೆಲಸವಾಗಿದೆ ಎಂದು ಟೀಕಿಸಿದರು.