ಸಿಎಂ ರಾಜೀನಾಮೆಗೆ ಕೈ ಆಗ್ರಹ

ಬೆಂಗಳೂರು,ಏ.೨೫:ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಮೀಸಲಾತಿಯ ವಂಚನೆ ಸುಪ್ರೀಂಕೋರ್ಟ್‌ನಲ್ಲಿ ಬಯಲಾಗಿದ್ದು, ಬೊಮ್ಮಾಯಿರವರು ಒಂದೂ ಕ್ಷಣವೂ ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರುವ ಹಕ್ಕನ್ನು ಕಳೆದುಕೊಂಡಿದ್ದಾರೆ. ಕೂಡಲೇ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಆಗ್ರಹಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸುರ್ಜೇವಾಲಾ ಅವರು ಲಿಂಗಾಯತರು ಮತ್ತು ಒಕ್ಕಲಿಗರ ಮೀಸಲಾತಿ ಹೆಚ್ಚಳ ಹಾಗೂ ಎಸ್‌ಸಿ/ಎಸ್‌ಟಿಗಳಿಗೆ ಆಂತರಿಕ ಮೀಸಲಾತಿ ಮತ್ತು ಹೆಚ್ಚಿನ ಮೀಸಲಾತಿ ಕುರಿತು ಬೊಮ್ಮಾಯಿ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಅಫಿಡೆವಿಟ್ ಸಲ್ಲಿಸದ ಕಾರಣ ಸುಪ್ರೀಂಕೋರ್ಟ್ ಈ ಮೀಸಲಾತಿಗೆ ತಡೆ ನೀಡಿದೆ. ಬೊಮ್ಮಾಯಿ ಒಂದೂ ಕ್ಷಣವೂ ಸಿಎಂ ಆಗಿ ಮುಂದುವರೆಯುವ ಹಕ್ಕನ್ನು ಕಳೆದುಕೊಂಡಿದ್ದಾರೆ. ಕೂಡಲೇ ರಾಜೀನಾಮೆ ನೀಡಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಕನ್ನಡಿಗರನ್ನು ವಂಚಿಸಿರುವ ವಂಚನೆ ಮೀಸಲಾತಿ ಬಯಲಾಗಿದೆ. ಪ್ರಧಾನಿ ನರೇಂದ್ರಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಕೂಡಲೇ ಕರ್ನಾಟಕ ತೊರೆಯಬೇಕು. ಇವರು ಕರ್ನಾಟಕಕ್ಕೆ ಮತ್ತೆ ಬರುವ ಪ್ರಯತ್ನ ಮಾಡಬಾರದು ಎಂದು ಸುರ್ಜೇವಾಲಾ ಟ್ವೀಟ್‌ನಲ್ಲಿ ಹೇಳಿದ್ದಾರೆ.
ಲಿಂಗಾಯತರು, ಒಕ್ಕಲಿಗರು, ಪರಿಶಿಷ್ಟ ಜಾತಿ, ಪಂಗಡದವರ ಜತೆ ವಂಚನೆಯ ಮೀಸಲಾತಿ ಆಟಲ ಏಕೆ ಆಡಿದ್ದೀರಿ, ಇದಕ್ಕೆ ಉತ್ತರಿಸಿ ಎಂದು ಪ್ರಧಾನಿ ಮೋದಿ ಮತ್ತು ಬೊಮ್ಮಾಯಿರವರನ್ನು ಒತ್ತಾಯಿಸಿರುವ ಸುರ್ಜೇವಾಲಾ, ಈ ಮೀಸಲಾತಿಯನ್ನು ನ್ಯಾಯಾಲಯದಲ್ಲಿ ಏಕೆ ಸಮರ್ಥಿಸಿಕೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ಮೀಸಲಾತಿ ಬಗ್ಗೆ ನ್ಯಾಯಾಲಯದಲ್ಲಿ ಬೊಮ್ಮಾಯಿ ಸರ್ಕಾರ ಅಫಿಡೆವಿಟ್ ಸಲ್ಲಿಸಲು ವಿಫಲವಾಗಿರುವುದು ಏಕೆ? ಎಂದವರು ಪ್ರಶ್ನಿಸಿದ್ದಾರೆ.
ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಮಾ. ೧೪ ರಂದು ಸಂಸತ್‌ನಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿಯನ್ನು ಹೆಚ್ಚಳ ಮಾಡುವುದನ್ನು ತಿರಸ್ಕರಿಸಿರುವುದನ್ನೂ ಅವರು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.
ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಳವನ್ನು ಸಂವಿಧಾನದ ೯ನೇ ಷೆಡ್ಯೂಲ್‌ನಲ್ಲಿ ಕೇಂದ್ರ ಸರ್ಕಾರ ಸೇರ್ಪಡೆ ಮಾಡದಿರುವ ಬಗ್ಗೆಯೂ ಸುರ್ಜೇವಾಲಾ ಪ್ರಶ್ನೆ ಮಾಡಿದ್ದಾರೆ.
ಪ್ರಧಾನಿ ನರೇಂದ್ರಮೋದಿ ಅವರು ಈಗಲಾದರೂ ಎಸ್‌ಸಿ/ಎಸ್‌ಟಿ ಮತ್ತು ಲಿಂಗಾಯತರು, ಒಕ್ಕಲಿಗರನ್ನು ಮೀಸಲಾತಿ ಹೆಸರಿನಲ್ಲಿ ವಂಚಿಸಿರುವುದಕ್ಕೆ ಸಾರ್ವಜನಿಕವಾಗಿ ಕ್ಷಮೆಯಾಚಿಸುತ್ತಾರೆಯೇ ಎಂದು ಸುರ್ಜೇವಾಲಾ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.