ಸಿಎಂ ರಾಜೀನಾಮೆಗೆ ಆಗ್ರಹ

(ಸಂಜೆವಾಣಿ ಪ್ರತಿನಿಧಿಯಿಂದ)
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ರಾಜ್ಯಸರ್ಕಾರದ ಧೋರಣೆ ಖಂಡಿಸಿ ಬಿಜೆಪಿ ವತಿಯಿಂದ ಇಂದು ಬೆಳಿಗ್ಗೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಶಾಸಕರಾದ ಡಾ. ಸಿ.ಎನ್ ಅಶ್ವತ್ಥನಾರಾಯಣ, ಕೆ. ಗೋಪಾಲಯ್ಯ, ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಗೋವಿಂದ ಕಾರಜೋಳ, ಮಾಜಿ ಎಂಎಲ್‌ಸಿ ಅಶ್ವತ್ಥ ನಾರಾಯಣ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ಪಿ.ಸಿ ಮೋಹನ್, ಶಾಸಕ ಎಲ್.ಎ. ಸುಬ್ರಮಣ್ಯ ಮತ್ತಿತರರು ಭಾಗವಹಿಸಿದ್ದರು.

ಬೆಂಗಳೂರು,ಸೆ.೨೩:ರಾಜ್ಯದಲ್ಲಿ ಮಳೆ ಕೊರತೆಯುಂಟಾಗಿದ್ದರೂ ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ಕಾವೇರಿ ನೀರು ಬಿಡುವ ಮೂಲಕ ರಾಜ್ಯದ ಜನರನ್ನು ಸಂಕಷ್ಟಕ್ಕೆ ಸರ್ಕಾರ ತಳ್ಳಿದೆ. ಇದರ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ಬಿಜೆಪಿ ಆಗ್ರಹಿಸಿದೆ.
ನೀರು ಬಿಟ್ಟಿರುವುದನ್ನು ವಿರೋಧಿಸಿ ಮೈಸೂರು ಬ್ಯಾಂಕ್ ವೃತ್ತದ ಬಳಿ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿ ರಾಜ್ಯಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿತು.ಪ್ರತಿಭಟನೆ ವೇಳೆ ರಸ್ತೆ ತಡೆ ನಡೆಸಲು ಯತ್ನಿಸಿದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಮುಖಂಡರಾದ ಗೋವಿಂದ ಕಾರಜೋಳ, ಡಾ. ಸಿ.ಎಸ್. ಅಶ್ವತ್ಥನಾರಾಯಣ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.ಇತ್ತ ಮಂಡ್ಯದಲ್ಲೂ ಕಾವೇರಿ ಆಕ್ರೋಶದ ಕಿಚ್ಚು ಸ್ಫೋಟಗೊಂಡಿದ್ದು, ಕನ್ನಡಪರ ಸಂಘಟನೆಗಳು, ರಾಜ್ಯ ರೈತ ಹಿತರಕ್ಷಣಾ ಸಮಿತಿ ಇಂದು ಕರೆ ನೀಡಿರುವ ಮಂಡ್ಯ ನಗರ ಹಾಗೂ ಮದ್ದೂರು ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಮಂಡ್ಯ ಹಾಗೂ ಮದ್ದೂರಿನಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.ವಿದ್ಯಾರ್ಥಿಗಳು ಕೂಡ ರಸ್ತೆಗಿಳಿದು ಉಗ್ರ ಪ್ರತಿಭಟನೆ ನಡೆಸಿ ತಮಿಳುನಾಡಿಗೆ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸಬೇಕೆಂದು ಆಗ್ರಹಿಸಿದರು.ಕಾವೇರಿ ನದಿ ನೀರು ವಿಚಾರದಲ್ಲಿ ರಾಜ್ಯಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಪ್ರತಿಪಕ್ಷ ಬಿಜೆಪಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿತು. ಪಕ್ಷದ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿ ರಾಜ್ಯಸರ್ಕಾರದ ವಿರುದ್ಧ ಘೋಷಣೆ ಕೂಗಿ ರೈತರ ಹಿತ ಕಾಯಲು ವಿಫಲವಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.ಈ ವೇಳೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಇಂದು ಕಾಂಗ್ರೆಸ್ ಪಕ್ಷ ತಮಿಳುನಾಡು ಏಜೆಂಟ್ ಮಾದರಿ ವರ್ತನೆ ಮಾಡುತ್ತಿದೆ. ಜತೆಗೆ, ಸುಪ್ರೀಂ ಕೋರ್ಟ್ ಹೇಳುವ ಮುನ್ನವೇ ನೀರು ಹರಿಸಿ ನಮ್ಮ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಕಾರಣವಾಗಿದೆ ಎಂದು ಕಾರಿದರು.ಸುಪ್ರೀಂಕೋರ್ಟ್‌ನಿಂದ ತಜ್ಞರ ಸಮಿತಿ ಕಳುಹಿಸಿಕೊಟ್ಟು, ಯಾವ ಜಲಾಶಯದಲ್ಲಿ ಎಷ್ಟು ನೀರಿದೆ ಎಂದು ಮನವರಿಕೆ ಮಾಡಿಕೊಡಲಿ. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯೋಗ್ಯತೆ ಇದ್ದರೆ ಈ ಸಮಸ್ಯೆ ಸರಿಪಡಿಸಲು ಮುಂದಾಗಲಿ.ಇಲ್ಲದಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.ಬಸವರಾಜ ಬೊಮ್ಮಾಯಿ ಮಾತನಾಡಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಇಂಡಿಯಾ ಒಕ್ಕೂಟದ ನೇತೃತ್ವವಹಿಸಿದ್ದು, ಅವರು ಈ ಕೂಡಲೇ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಜತೆ ಚರ್ಚಿಸಿ ಈ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.ಸಂಸದ ಪಿ.ಸಿ. ಮೋಹನ್ ಮಾತನಾಡಿ, ಪ್ರತಿಭಟನೆಯಲ್ಲಿ ಕಾವೇರಿ ಜಲಾನಯನ ಪ್ರದೇಶದ ಜನರು ನೀರಿಗಾಗಿ ಗುಳೆ ಹೋಗುವ ಸ್ಥಿತಿ ಬರಲಿದೆ.
ಕರ್ನಾಟಕ ಮತ್ತು ಕನ್ನಡಿಗರ ಹಿತ ಕಾಪಾಡುವಲ್ಲಿ ಕಾಂಗ್ರೆಸ್ ಸರಕಾರವು ಸಂಪೂರ್ಣ ವಿಫಲವಾಗಿದೆ ಎಂದು ಅವರು ಆಕ್ಷೇಪಿಸಿದರು.ತಮಿಳುನಾಡಿಗೆ ನೀರು ಹರಿಸಿರುವುದನ್ನು ವಿರೋಧಿಸಿ ಮಂಡ್ಯ ನಗರ ಹಾಗೂ ಮದ್ದೂರು ಪಟ್ಟಣದಲ್ಲಿ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ವಾಣಿಜ್ಯ ಚಟುವಟಿಕೆ ಸಂಪೂರ್ಣ ಸ್ಥಬ್ಧಗೊಂಡಿದೆ. ಆಟೋ, ಖಾಸಗಿ, ಸಾರಿಗೆ ಸಂಸ್ಥೆಯ ಬಸ್‌ಗಳು ರಸ್ತೆಗಿಳಿದಿಲ್ಲ. ಶಾಲಾ-ಕಾಲೇಜು, ಚಿತ್ರಮಂದಿರಗಳು ಬಂದ್ ಆಗಿದ್ದು, ಸದಾ ಗಿಜಿಗುಡುತ್ತಿದ್ದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗವನ್ನು ಕಲ್ಪಿಸಲಾಗಿದೆ.
ವಿವಿಧ ಸಂಘಟನೆಗಳ ಸದಸ್ಯರು ಬೈಕ್ ರ್‍ಯಾಲಿ ನಡೆಸಿ ಕಾವೇರಿ ಜಾಗೃತಿ ಕುರಿತು ಕರಪತ್ರ ಹಂಚಿದರು. ರೈತ ಮುಖಂಡರು ಜೆಸಿ ವೃತ್ತದಲ್ಲಿ ಮಲಗಿ ಕೇಂದ್ರ ಮತ್ತು ರಾಜ್ಯಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುತ್ತಿರುವುದನ್ನು ವಿರೋಧಿಸಿ ಮಂಡ್ಯದಲ್ಲಿ ಬಿಜೆಪಿ ಹೋರಾಟದ ಅಖಾಡಕ್ಕೆ ಧುಮುಕಿದೆ. ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ಮಣ್ಣು ತಿಂದು ಉಗ್ರ ಪ್ರತಿಭಟನೆ ನಡೆಸಿದರು.ರಾಜ್ಯಸರ್ಕಾರದ ಕ್ರಮಕ್ಕೆ ಕಿಡಿಕಾರಿರುವ ಅವರು, ರೈತರ ಬಾಯಿಗೆ ಮಣ್ಣು ಹಾಕಿದ್ದಾರೆ ಎಂದು ಸಿಟ್ಟು ಪ್ರದರ್ಶಿಸಿದರು.
ವಿದ್ಯಾರ್ಥಿಗಳ ಪ್ರತಿಭಟನೆ
ತಮಿಳುನಾಡಿಗೆ ನೀರು ಹರಿಸಿರುವುದನ್ನು ವಿರೋಧಿಸಿ ಮಂಡ್ಯ ಮತ್ತು ಮದ್ದೂರಿನಲ್ಲಿ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ.
ಇತ್ತ ಬೆಂಗಳೂರಿನಲ್ಲೂ ಕಾವೇರಿ ನದಿ ನೀರು ವಿವಾದ ಭುಗಿಲ್ಲೆದ್ದಿರುವ ಹಿನ್ನೆಲೆಯಲ್ಲಿ ಮುಂದಿನ ಹೋರಾಟದ ರೂಪು ರೇಷೆಗಳ ಬಗ್ಗೆ ಚರ್ಚೆ ನಡೆಸಲು ಕನ್ನಡ ಪರ ಸಂಘಟನೆಗಳು ಫ್ರೀಡಂಪಾರ್ಕ್‌ನಲ್ಲಿ ಸಭೆ ಸೇರಿ ಮುಂದಿನ ಹೋರಾಟದ ರೂಪು ರೇಷೆಗಳ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ.

ಕೆಆರ್‌ಎಸ್ ನೀರಿನ ಮಟ್ಟ ೯೬ ಅಡಿಗೆ ಇಳಿಕೆ
ವ್ಯಾಪಕ ವಿರೋಧದ ನಡುವೆ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದರಿಂದ ಮಂಡ್ಯ ಜಿಲ್ಲೆಯ ಜೀವನಾಡಿ ಕೃಷ್ಣರಾಜ ಸಾಗರ ಜಲಾಶಯದ ನೀರಿನ
ಮಟ್ಟ ಇಂದು ೯೬ ಅಡಿಗೆ ಕುಸಿದಿದೆ.
ಸುಪ್ರೀಂಕೋರ್ಟ್‌ನ ಆದೇಶದ ಅನುಸಾರ ರಾಜ್ಯಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿದೆ. ನಿನ್ನೆ ತಮಿಳುನಾಡಿಗೆ ೨,೬೭೩ ಕ್ಯೂಸೆಕ್ ನೀರು ಹರಿಸಲಾಗಿತ್ತು, ಇಂದು ನೀರು ಹರಿಸುವ ಪ್ರಮಾಣ ೩ ಸಾವಿರ ಕ್ಯೂಸೆಕ್‌ಗೆ ಏರಿಕೆಯಾಗಿದೆ. ಅಂದರೆ ೩೦೦ ಕ್ಯೂಸೆಕ್‌ನಷ್ಟು ಹೆಚ್ಚುವರಿ ನೀರನ್ನು ಬಿಡಲಾಗುತ್ತಿದೆ.
ಇದೇ ವೇಳೆ ಜಲಾಶಯದ ಹೊರ ಹರಿವಿನ ಪ್ರಮಾಣ ಹೆಚ್ಚಾಗಿದ್ದರೂ ಒಳ ಹರಿವಿನ ಪ್ರಮಾಣ ಇಳಿಕೆಯಾಗಿದೆ. ನಿನ್ನೆ ೫,೮೪೫ ಕ್ಯೂಸೆಕ್ ಇದ್ದ ಒಳಹರಿವಿನ ಪ್ರಮಾಣ ಇಂದು ೫,೧೬೭ ಕ್ಯೂಸೆಕ್‌ಗೆ ಇಳಿಕೆ ಕಂಡಿದೆ. ಇದರಿಂದಾಗಿ ೧೨೪.೮೦ ಅಡಿ ನೀರು ಸಂಗ್ರಹ ಸಾಮರ್ಥ್ಯವಿರುವ ಕೆಆರ್‌ಎಸ್‌ನ ನೀರಿನ ಮಟ್ಟ ೯೬.೯೦ ಅಡಿಗೆ ಕುಸಿದಿದೆ.
ಕೆಆರ್‌ಎಸ್ ನೀರಿನ ಮಟ್ಟ

  • ಗರಿಷ್ಠ ಮಟ್ಟ ೧೨೪.೮೦
  • ಇಂದಿನ ಮಟ್ಟ ೯೬.೯೦
  • ಗರಿಷ್ಠ ಸಂಗ್ರಹ ೪೯.೪೫೨
  • ಇಂದಿನ ಸಂಗ್ರಹ ೨೦,೪೭೭
  • ಒಳಹರಿವು ೫,೧೪೭
  • ಹೊರ ಹರಿವು ೬,೦೩೪