ಸಿಎಂ ಮನಸ್ಸಿಗೆ ನೋವಾಗಿ ರಾಜೀನಾಮೆ ವಿಚಾರ ಪ್ರಸ್ತಾಪ : ಸವದಿ

ಅಥಣಿ,ಜೂ 8 : ರಾಜ್ಯದಲ್ಲಿ ಕೆಲವರು ಸಿಎಂ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ಕುರಿತ ಚರ್ಚೆ ಅನಗತ್ಯವಾಗಿದ್ದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮನಸ್ಸಿಗೆ ನೋವಾಗಿ ರಾಜೀನಾಮೆ ವಿಚಾರ ವ್ಯಕ್ತಪಡಿಸಿದ್ದಾರೆ ಎಂದು ಉಪಮಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ಅಥಣಿ ಪಟ್ಟಣದಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಕೊರೊನಾ ಸಂದರ್ಭದಲ್ಲಿ ಕೆಲವರು ಪದೇ ಪದೇ ಸಿಎಂ ಬದಲಾವಣೆ ಬಗ್ಗೆ ಮಾಧ್ಯಮಗಳ ಮುಂದೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ವಿಚಾರದಲ್ಲಿ ಸಿಎಂ ಬೇಜಾರು ಮಾಡಿಕೊಂಡು ಈ ಮಾತುಗಳನ್ನು ಹೇಳಿರಬಹುದು ಎಂದರು.
ಹೆಚ್.ವಿಶ್ವನಾಥ್ ಅವರು ಉತ್ತರ ಕರ್ನಾಟಕ ಭಾಗದವರು ಸಿಎಂ ಆಗುವುದರಲ್ಲಿ ತಪ್ಪಿಲ್ಲ ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಅವರ ಹೇಳಿಕೆ ವೈಯಕ್ತಿಕ ವಿಚಾರ. ಇದು ಯಾವುದೇ ಪಕ್ಷದ ನಿರ್ಧಾರ ಅಲ್ಲ. ಎಲ್ಲದಕ್ಕೂ ಹೈಕಮಾಂಡ್ ಇದೆ. ಸಿಎಂ ಹೇಳಿಕೆಯಿಂದ ರಾಜ್ಯ ರಾಜಕಾರಣದಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸವದಿ ಹೇಳಿದರು.