ಸಿಎಂ ಭೇಟಿಗೆ ವಾಣಿಜ್ಯ ಮಂಡಳಿ ನಿರ್ಧಾರ ಶೇ.50 ಮಿತಿ

ಬೆಂಗಳೂರು,ಏ. ೩- ಚಿತ್ರಮಂದಿರಗಳಲ್ಲಿ ಏಕಾಏಕಿ ಶೇಕಡ ೫೦ರಷ್ಟು ಸಾಮರ್ಥ್ಯ ನಿಗದಿ ಮಾಡಿರುವ ರಾಜ್ಯ ಸರ್ಕಾರದ ಕ್ರಮದ ಕುರಿತು ಬೇಸರ ವ್ಯಕ್ತಪಡಿಸಿರುವ ಚಲನಚಿತ್ರ ವಾಣಿಜ್ಯ ಮಂಡಳಿ ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ನಿರ್ಧರಿಸಿದೆ.

ವಾಣಿಜ್ಯ ಮಂಡಳಿಯಲ್ಲಿ ನಡೆದ ಮಾಜಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚಿತ್ರರಂಗದ ಈತ ಕಾಪಾಡುವಂತೆ ಮನವಿ ಮಾಡಲು ನಿರ್ಧರಿಸಲಾಗಿದೆ

ಈ ಕುರಿತು ಮಾಹಿತಿ ಹಂಚಿಕೊಂಡ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ ಜಯರಾಜ್ ಅವರು ಸರಕಾರ ಏಕಾಏಕಿ ನಿರ್ಧಾರ ತೆಗೆದುಕೊಂಡಿರುವುದು ಸರಿಯಲ್ಲ. ಈ ರೀತಿಯ ನಿರ್ಧಾರದಿಂದ ಈಗಾಗಲೇ ಬಿಡುಗಡೆಯಾಗಿರುವ ಯುವರತ್ನ ಚಿತ್ರ ಸೇರಿದಂತೆ ಚಿತ್ರಮಂದಿರದ ಮಾಲೀಕರು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಸರ್ಕಾರ ನೀತಿಗಳನ್ನು ಜಾರಿ ಮಾಡುವ ಮೊದಲು ತಿಳಿಸಿದರೆ ಅದಕ್ಕೆ ಹೊಂದಿಕೊಂಡು ನಡೆಯಲು ಸಹಕಾರಿಯಾಗಲಿದೆ ಅದನ್ನು ಬಿಟ್ಟು ಏಕಾಏಕಿ ಮಾಡುವುದರಿಂದ ಸಮಸ್ಯೆಗೆ ಸಿಲುಕಿದಂತಾಗಿದೆ ಎಂದು ಅವರು ಹೇಳಿದರು.

ಏಪ್ರಿಲ್ ೧೦ರ ತನಕ ಈಗಾಗಲೇ ಚಿತ್ರಮಂದಿರಗಳು ಬುಕ್ ಆಗಿವೆ ಇಂತಹ ಸಮಯದಲ್ಲಿ ಚಿತ್ರಮಂದಿರಗಳಿಗೆ ಶೇಕಡ ೫೦ರಷ್ಟು ಪ್ರೇಕ್ಷಕರ ಸಾಮರ್ಥ್ಯವನ್ನು ಮಿತಿಗೊಳಿಸಿರುವ ಹಿನ್ನೆಲೆಯಲ್ಲಿ ಚಿತ್ರಮಂದಿರದ ಮಾಲೀಕರು ಏನು ಮಾಡಬೇಕು ಎಂದು ಅವರು ಪ್ರಶ್ನಿಸಿದರು.

ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಅವರಿಗೆ ಚಿತ್ರರಂಗದ ಬಗ್ಗೆ ಕಾಳಜಿ ಇಲ್ಲ ನಿರ್ಮಾಪಕರ ಸಮಸ್ಯೆಯು ಅವರಿಗೆ ಅರಿವಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು

ಅವೈಜ್ಞಾನಿಕ:

ನಿಯಮದಿಂದ ಚಿತ್ರರಂಗವನ್ನು ಹೊರಗಿಡುವುದಾಗಿ ಸರಕಾರ ಹೇಳಿಕೆ ನೀಡಿ ಇದೀಗ ಏಕಾಏಕಿ ಚಿತ್ರಮಂದಿರಗಳಲ್ಲಿ ಶೇಕಡ ೫೦ರಷ್ಟು ಸಾಮರ್ಥ್ಯ ಜಾರಿ ಮಾಡಿರುವ ಕ್ರಮ ಅವೈಜ್ಞಾನಿಕ ದಿಂದ ಕೂಡಿದೆ ಎಂದು ನಿರ್ಮಾಪಕ ಉಮೇಶ್ ಬಣಕಾರ್ ತಿಳಿಸಿದ್ದಾರೆ.

ಸರ್ಕಾರ ಮುಂಚೆಯೇ ಮಾಹಿತಿ ನೀಡಿದ್ದಾರೆ ಯುವರತ್ನ ಚಿತ್ರ ಬಿಡುಗಡೆ ಮುಂದೂಡುವುದು ಅಥವಾ ಮುಂದೇನು ಮಾಡಬೇಕು ಎನ್ನುವ ನಿರ್ಧಾರ ತೆಗೆದುಕೊಳ್ಳುತ್ತಿತ್ತು ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿ ನಿರ್ಮಾಪಕರಿಗೆ ಸರ್ಕಾರದ ಕ್ರಮ ಮಾರಕವಾಗಲಿದೆ ಎಂದು ಅವರು ಹೇಳಿದರು.

ಸಭೆಯಲ್ಲಿ ಮಾಜಿ ಅಧ್ಯಕ್ಷರಾದ ಸಾ.ರಾ ಗೋವಿಂದು, ಕೆಸಿಎನ್ ಚಂದ್ರಶೇಖರ್, ಥಾಮಸ್ ಡಿಸೋಜಾ, ಕೆವಿ ಚಂದ್ರಶೇಖರ್, ಚಿನ್ನೇಗೌಡ ಸೇರಿದಂತೆ ಹಾಲಿ ಪದಾಧಿಕಾರಿಗಳು ಉಪಸ್ಥಿತರಿದ್ದರು