ಸಿಎಂ ಬಿಎಸ್ ವೈಗೆ ಎರಡನೇ ಬಾರಿ ಕೊರೋನಾ ಧೃಢ

ಬೆಂಗಳೂರು, ಏ.16- ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಕೊರೋನಾ‌ ಸೋಂಕು ಧೃಢ ಪಟ್ಟಿದೆ. ಈ ಮೂಲಕ ಅವರಿಗೆ ಎರಡನೇ ಬಾರಿಗೆ ಸೋಂಕು ಕಾಣಿಸಿಕೊಂಡಿದೆ.

ಕಳೆದ ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು ಬೆಳಗ್ಗೆ ತಮ್ಮ ನಿವಾಸ ಕಾವೇರಿಯಲ್ಲಿ ಸೋಂಕು ನಿಯಂತ್ರಣ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆಸ್ಪತ್ರೆಯಲ್ಲಿ ಕೊರೊನಾ ಸೋಂಕು ಪತ್ತೆ ಪರೀಕ್ಷೆ ನಡೆಸಿದಾಗ ಅವರಿಗೆ ಪಾಸಿಟಿವ್ ಇರುವುದು ದೃಢಪಟ್ಟಿದೆ. ತಕ್ಷಣ ಅವರನ್ನು ಎಂಎಸ್ ರಾಮಯ್ಯ ಆಸ್ಪತ್ರೆಯಿಂದ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪರೀಕ್ಷೆಗೆ ಸಲಹೆ:

ಕೊರೊನಾ ಸೋಂಕು ಧೃಢ ಪಟ್ಟಿರುವ ವಿಷಯವನ್ನು ಟ್ವೀಟ್ ನಲ್ಲಿ ಖಚಿತಪಡಿಸಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ಜ್ವರದ ಹಿನ್ನಲೆಯಲ್ಲಿ ಇಂದು ತಪಾಸಣೆಗೆ ಒಳಪಟ್ಟಾಗ ಕೋವಿಡ್ ಪರೀಕ್ಷಾ ವರದಿ ಪಾಸಿಟಿವ್ ಬಂದಿರುತ್ತದೆ. ಅಲ್ಪ ಪ್ರಮಾಣದಲ್ಲಿ ರೋಗ ಲಕ್ಷಣಗಳಿರುವುದರಿಂದ ವೈದ್ಯರ ಸಲಹೆಯಂತೆ ಮಣಿಪಾಲ್ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ಸಂಪರ್ಕಕ್ಕೆ ಬಂದಿದ್ದವರು ಕ್ವಾರಂಟೈನ್ ನಲ್ಲಿದ್ದು, ಒಮ್ಮೆ ಪರೀಕ್ಷಿಸಿಕೊಳ್ಳಿ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ

ಈ ಹಿಂದೆಯೂ ಕೂಡ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಕೊರೋನಾ ಕಾಣಿಸಿಕೊಂಡಾಗ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ
.
ಬೆಳಗ್ಗೆ ಸಭೆಯಲ್ಲಿದ್ದವರಿಗೆ ಆತಂಕ:

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ನಿವಾಸ ಕಾವೇರಿಯಲ್ಲಿ ಇಂದು ಬೆಳಗ್ಗೆ ಕೊರೋನಾ ಸೋಂಕು ಸಂಬಂಧ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಸೇರಿದಂತೆ ಸರ್ಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಡೆಸಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ಸಚಿವ ಸುಧಾಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಮಹಾ ನಿರ್ದೇಶಕ ಪ್ರವೀಣ್ ಸೂದ್, ಆಯುಕ್ತ ಗೌರವ್ ಗುಪ್ತಾ ಸೇರಿದಂತೆ ಹಿರಿಯ ಅಧಿಕಾರಿಗಳಲ್ಲಿ ಕೂಡ ಆತಂಕ ಹೆಚ್ಚುವಂತೆ ಮಾಡಿದೆ

ಬಿಎಸ್ ವೈ ಚೇತರಿಕೆ ಹಾರೈಕೆ

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಕೊರೊನಾ ಸೋಂಕು ಎರಡನೇ ಬಾರಿಗೆ ದೃಢಪಟ್ಟಿರುವ ವಿಷಯ ತಿಳಿಯುತ್ತಿದ್ದಂತೆ ಹಲವು ಸಚಿವರು ಹಾಗೂ ಹಿರಿಯ ನಾಯಕರು ಯಡಿಯೂರಪ್ಪ ಅವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ. ಸಿ .ಎನ್ ಅಶ್ವಥ್ ನಾರಾಯಣ, ಸಚಿವರಾದ ಜಗದೀಶ್ ಶೆಟ್ಟರ್, ಬಸವರಾಜ ಬಸವರಾಜ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸೇರಿದಂತೆ ಅನೇಕ ನಾಯಕರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಆರೈಕೆ ಶುಭಕೋರಿದ್ದಾರೆ