ಸಿಎಂ ಬಿಎಸ್‌ವೈ ಪರ ಮುಂದುವರೆದ ಮಠಾಧೀಶರ ಸಭೆ

ತುಮಕೂರು, ಜು. ೨೨- ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಪೂರ್ಣಾವಧಿವರೆಗೆ ಮುಖ್ಯಮಂತ್ರಿಯಾಗಿ ಮುಂದುವರೆಸುವಂತೆ ವಿವಿಧ ಮಠಾಧೀಶರುಗಳು ಜಿಲ್ಲೆಯ ಗುಬ್ಬಿಯಲ್ಲಿಂದು ಸಭೆ ನಡೆಸಿ ಬಿಜೆಪಿ ವರಿಷ್ಠರನ್ನು ಒತ್ತಾಯಿಸಿದರು.
ಗುಬ್ಬಿ ಪಟ್ಟಣದ ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ನಡೆದ ಸಭೆಯಲ್ಲಿ ದೊಡ್ಡಗುಣಿ ಮಠದ ಶ್ರೀ ರೇವಣ್ಣ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಬೆಟ್ಟದಹಳ್ಳಿಯ ಶ್ರೀ ಚಂದ್ರಶೇಖರ ಸ್ವಾಮೀಜಿ, ಬಿ. ಕೋಡಿಹಳ್ಳಿ ಮಠದ ಶ್ರೀ ಬಸವ ಭೃಂಗೇಶ ಸ್ವಾಮೀಜಿ. ತೆವಡಿಹಳ್ಳಿ ಮಠದ ಶ್ರೀ ಗೋಸಲ ಚನ್ನಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರುಗಳು ಭಾಗವಹಿಸಿದ್ದರು.
ಯಡಿಯೂರಪ್ಪನವರು ೪ ಬಾರಿ ಮುಖ್ಯಮಂತ್ರಿಯಾಗಿ ರಾಜ್ಯದ ಜನರ ಹಿತ ಕಾಪಾಡುವಲ್ಲಿ ಶ್ರಮ ವಹಿಸಿ ಕೆಲಸ ಮಾಡಿದ್ದಾರೆ. ಇಂತಹ ಜನಪರ ಕಾಳಜಿಯುಳ್ಳ ಯಡಿಯೂರಪ್ಪನವರನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಬಾರದು ಎಂದು ಬಿಜೆಪಿ ಹೈಕಮಾಂಡ್‌ನ್ನು ಆಗ್ರಹಿಸಿದರು.
ರಾಜ್ಯದಲ್ಲಿ ಬಿಜೆಪಿ ಪಕ್ಷದ ಬೆಳವಣಿಗೆಗೆ ಯಡಿಯೂರಪ್ಪನವರ ಶ್ರಮ ಅಪಾರ. ರಾಜ್ಯದಲ್ಲಿ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದರೆ ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರದಿಂದ ದೂರವೇ ಉಳಿಯಬೇಕಾಗುತ್ತದೆ. ಇದನ್ನು ಬಿಜೆಪಿ ವರಿಷ್ಠರು ಅರ್ಥ ಮಾಡಿಕೊಂಡು ಇನ್ನು ಎರಡು ವರ್ಷ ಯಡಿಯೂರಪ್ಪನವರನ್ನೆ ಮುಂದುವರೆಸಬೇಕು ಎಂದು ಮಠಾಧೀಶರುಗಳು ಒತ್ತಾಯಿಸಿದರು.
ಕರ್ನಾಟಕದಲ್ಲಿ ಬಿಜೆಪಿ ಪಕ್ಷದ ಸಂಘಟನೆ ಮತ್ತು ಅಧಿಕಾರಕ್ಕೆ ತರುವಲ್ಲಿ ಯಡಿಯೂರಪ್ಪನವರೇ ಪ್ರಮುಖರು. ಬಿಜೆಪಿ ಅಂದರೆ ಯಡಿಯೂರಪ್ಪ, ಯಡಿಯೂರಪ್ಪ ಅಂದರೆ ಬಿಜೆಪಿ ಎನ್ನುವಷ್ಟರ ಮಟ್ಟಿಗೆ ಹೆಸರು ಮಾಡಿದ್ದಾರೆ. ಕೇವಲ ಹೆಸರಷ್ಟೇ ಅಲ್ಲದೆ ಪ್ರಾಮಾಣಿಕವಾಗಿ ಪಕ್ಷದ ಬಲವರ್ಧನೆಗೆ ಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ. ಎಂತಹ ಕಷ್ಟದ ಸಂದರ್ಭದಲ್ಲಿ ಪಕ್ಷವನ್ನ ಮುನ್ನಡೆಸುತ್ತಾ, ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನಡೆಸಿದ್ದಾರೆ. ಇಂತಹ ನಾಯಕನನ್ನು ಅಧಿಕಾರದಿಂದ ಕೆಳಗಿಳಿಸಿದರೆ ಪಕ್ಷಕ್ಕೆ ತುಂಬಾ ಹೊಡೆತ ಬೀಳಲಿದೆ ಎಂದು ಸ್ವಾಮೀಜಿಗಳು ಹೇಳಿದರು.
ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಬಾರದು. ಒಂದು ವೇಳೆ ಹಠಕ್ಕೆ ಬಿದ್ದು ಬದಲಾವಣೆ ಮಾಡಿದರೆ ಮುಂದಿನ ದಿನಗಳಲ್ಲಿ ಬಿಜೆಪಿ ಹೈ ಕಮಾಂಡ್ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಮಠಾಧೀಶರು ಎಚ್ಚರಿಕೆಯ ಸಂದೇಶ ನೀಡಿದ್ದಾರೆ.