ಸಿಎಂ ಬಹಿರಂಗ ಚರ್ಚೆ ಹೈಕಮಾಂಡ್‌ನಿಂದ ಸೂಕ್ತ ಕ್ರಮ

ಬೆಂಗಳೂರು,ಜು.೨೬- ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರಾಗಬೇಕು ಎಂಬ ಬಗ್ಗೆ ಬಹಿರಂಗ ಚರ್ಚೆ ನಡೆಸುತ್ತಿರುವವರ ವಿರುದ್ಧ ಏನೇನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್‌ಖಾನ್‌ರವರಿಗೆ ಹೈಕಮಾಂಡ್ ಎಚ್ಚರಿಕೆ ನೀಡಿರುವ ಬಗ್ಗೆ ನಾನು ಪತ್ರಿಕೆಗಳಲ್ಲಿ ಇಂದು ನೋಡಿದ್ದೇನೆ. ನನಗೂ ಮಾಹಿತಿ ಬಂದಿದೆ ಎಂದರು.
ಯಾರ್‍ಯಾರ ಮೇಲೆ ಯಾವ ರೀತಿಯ ಕ್ರಮ ತೆಗೆದುಕೊಳ್ಳಬೇಕೋ ಅದನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದು ಅವರು ಮಾರ್ಮಿಕವಾಗಿ ಹೇಳಿದರು.ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು ಎಂದು ಜಮೀರ್‌ಅಹ್ಮದ್ ಖಾನ್ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗರಂ ಆಗಿ ವ್ಯಕ್ತಿ ಪೂಜೆ ಬೇಡ. ಎಲ್ಲರೂ ಬಾಯಿ ಮುಚ್ಚಿಕೊಂಡು ಕೆಲಸ ಮಾಡಿ ಎಂದು ಖಡಕ್ಕಾಗಿ ಹೇಳಿದ್ದರು.
ಕೆಪಿಸಿಸಿ ಅಧ್ಯಕ್ಷರ ಹೇಳಿಕೆಗೆ ತಿರುಗೇಟು ನೀಡಿದ್ದ ಜಮೀರ್‌ಅಹ್ಮದ್ ಖಾನ್, ನಾನು ಸತ್ತಾಗ ಮಾತ್ರ ಬಾಯಿ ಮುಚ್ಚಿಕೊಳ್ಳುತ್ತೇನೆ ಎಂದು ಹೇಳಿ ಕೆಪಿಸಿಸಿ ಅಧ್ಯಕ್ಷರ ಜತೆ ವಾಕ್ಸಮರ ನಡೆಸಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿ ವಿರೋಧ ಪಕ್ಷಗಳು ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಇಲ್ಲ, ಕೆಪಿಸಿಸಿ ಅಧ್ಯಕ್ಷರಿಗೆ ಶಾಸಕರೊಬ್ಬರು ಸವಾಲು ಹಾಕಿದರೂ ಏನೂ ಮಾಡದಂತಹ ಪರಿಸ್ಥಿತಿ ಇದೆ ಎಂದೆಲ್ಲ ಬಿಜೆಪಿ ನಾಯಕರುಗಳು ಗೇಲಿ ಮಾಡಿದ್ದರು.ಶಾಸಕ ಜಮೀರ್ ಅಹ್ಮದ್‌ಖಾನ್‌ರವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಹೈಕಮಾಂಡ್ ನಿನ್ನೆ ಜಮೀರ್ ಅಹ್ಮದ್‌ಖಾನ್‌ರವರಿಗೆ ಖಡಕ್ ಎಚ್ಚರಿಕೆ ನೀಡಿ ಲಕ್ಷ್ಮಣರೇಖೆ ದಾಟದಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಅವರಿಗೆ ನಿನ್ನೆ ರಾತ್ರಿ ಪತ್ರ ಮುಖೇನ ಎಚ್ಚರಿಕೆ ನೀಡಿದ್ದರು.