ಸಿಎಂ ಬಳಿ ಜಾಲಹಳ್ಳಿ ತಾಲೂಕು ನಿಯೋಗ

ದೇವದುರ್ಗ.ಅ.೩೧-ಜಾಲಹಳ್ಳಿ ಹೊಸ ತಾಲೂಕಾಗಿ ಘೋಷಣೆ ಮಾಡುವಂತೆ ಒತ್ತಾಯಿಸಿ ಶೀಘ್ರದಲ್ಲಿ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮನವಿ ಸಲ್ಲಿಸಲು ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ತಾಲೂಕು ಹೋರಾಟ ಸಮಿತಿ ಪೂರ್ವಭಾವಿ ಸಭೆಯಲ್ಲಿ ಒಮ್ಮತದ ತೀರ್ಮಾನ ಗುರುವಾರ ಕೈಗೊಳ್ಳಲಾಯಿತು.
ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಆದನಗೌಡ ಪಾಟೀಲ್ ಮಾತನಾಡಿ, ಜಾಲಹಳ್ಳಿ ತಾಲೂಕು ಆಗಲು ಎಲ್ಲ ಅರ್ಹತೆ ಹೊಂದಿದೆ. ತಾಲೂಕು ರಚನೆಗೆ ಸರ್ಕಾರ ಹಾಗೂ ಶಾಸಕರು ಇಚ್ಚಾಶಕ್ತಿ ಪ್ರದರ್ಶನ ಮಾಡಬೇಕು. ಹೋರಾಟ ಸಮಿತಿ ನಿಯೋಗ ಮುಖ್ಯಮಂತ್ರಿ ಯಡಿಯೂರಪ್ಪ, ವಿಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಕುಮಾರಸ್ವಾಮಿ ಜತೆಗೆ ಸಂಬಂಧಿಸಿದ ಸಚಿವರಿಗೆ ಮನವಿ ಸಲ್ಲಿಸಲಿದೆ. ಇದಕ್ಕೂ ಸರ್ಕಾರ ಜಗ್ಗದಿದ್ದರೆ ಕಾನೂನು ಹೋರಾಟ ನಡೆಸೋಣ ಎಂದು ಹೇಳಿದರು.
ಸಮಿತಿ ಅಧ್ಯಕ್ಷ ಕೆ.ಎಸ್.ನಾಡಗೌಡ ನೇತೃತ್ವವಹಿಸಿ ಮಾತನಾಡಿದರು. ಮುಖಂಡರಾದ ಬಸವರಾಜ, ಸಿದ್ದನಗೌಡ ಪಾಟೀಲ್, ರಂಗಣ್ಣ ಕೋಲ್ಕಾರ್, ಭೂತಪ್ಪ ದೇವರಮನಿ, ನರಸಣ್ಣ ನಾಯಕ, ಹುಸೇನಪ್ಪ ಗುತ್ತೇದಾರ, ಎನ್.ಲಿಂಗಪ್ಪ, ಸಂಗಣ್ಣ ಸೋಮನಮರಡಿ, ಗಿರಿಯಪ್ಪ ಪೂಜಾರಿ, ರಾಜಾ ವಾಸುದೇವನಾಯಕ, ರಂಗಪ್ಪ ಬಂಡಿ, ಸಾಬಣ್ಣ ಹೂಗಾರ ಇತರರು ಇದ್ದರು.