ಸಿಎಂ ಬದಲಿಸುವಷ್ಟು ಶಕ್ತಿ ನನಗಿಲ್ಲ

ಬೆಂಗಳೂರು,ಮೇ ೨೭- ನನ್ನ ಅಧಿಕಾರವನ್ನು ನನ್ನ ಮಗ ಚಲಾಯಿಸಿದರೆ ಅದು ಸರಿಯಲ್ಲ. ರಾಜ್ಯದಲ್ಲಿ ಇದು ನಡೆಯುತ್ತಿದೆ. ನನ್ನ ಇಲಾಖೆಯಲ್ಲಿ ಹಸ್ತಕ್ಷೇಪ ಸಹಿಸಲ್ಲ ಎಂದು ಸಚಿವ ಯೋಗೇಶ್ವರ್ ಹೇಳಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ದೆಹಲಿ ಬೇಟಿ ಬಗ್ಗೆ ವಿವರಗಳನ್ನು ಹಂಚಿಕೊಂಡ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರ ಬದಲಾವಣೆ ಉದ್ದೇಶದಿಂದ ದೆಹಲಿಗೆ ಹೋಗಿರಲಿಲ್ಲ. ತಮಗೆ ಆ ರೀತಿಯ ಉದ್ದೇಶ ಇಲ್ಲ ಎಂದು ಸ್ಪಷ್ಟ ಪಡಿಸಿರುವ ಸಚಿವ ಯೋಗೇಶ್ವರ್, ಮುಖ್ಯಮಂತ್ರಿಗಳನ್ನು ಬದಲಿಸುವಷ್ಟು ಶಕ್ತಿ ತಮಗೆ ಇಲ್ಲ ಎಂದಿದ್ದಾರೆ.
ದೆಹಲಿಗೆ ವೈಯಕ್ತಿಕ ಕೆಲಸಕ್ಕೆ ಹೋಗಿದ್ದೆ. ದೆಹಲಿಗೆ ಹೋಗುತ್ತಿರುತ್ತೇನೆ, ಬರುತ್ತಿರುತ್ತೇನೆ. ಆದರೆ ನನ್ನ ದೆಹಲಿ ಭೇಟಿ ಯಾಕೆ ಸುದ್ದಿಯಾಯಿತೋ ಗೊತ್ತಿಲ್ಲ ಎಂದರು.
ರಾಜ್ಯದ ಬಿಜೆಪಿ ಸರ್ಕಾರ ಶುದ್ಧ ಬಿಜೆಪಿ ಸರ್ಕಾರವಾಗಿ ಉಳಿದಿಲ್ಲ. ವಿರೋಧ ಪಕ್ಷವಾದ ಕಾಂಗ್ರೆಸ್-ಜೆಡಿಎಸ್ ಜತೆ ಈಗ ಹೊಂದಾಣಿಕೆ ಮಾಡಿಕೊಂಡು ಮುಂದೆ ಚುನಾವಣೆಯಲ್ಲಿ ಹೋರಾಡುವುದು ಕಷ್ಟ. ಮುಂದೆ ನಾವು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಬೇಕು. ಇದನ್ನೆಲ್ಲ ವರಿಷ್ಠರ ಗಮನಕ್ಕೆ ತಂದಿದ್ದೇನೆ ಎಂದರು.
ವರಿಷ್ಠರ ಮುಂದೆ ನನ್ನ ನೋವು ತೋಡಿಕೊಳ್ಳುತ್ತೇನೆ. ಅದರಲ್ಲಿ ತಪ್ಪೇನಿದೆ. ಯಾವ ವಿಚಾರವನ್ನೂ ಎಲ್ಲಿ ಹೇಳಬೇಕೋ ಅಲ್ಲಿ ಹೇಳುತ್ತೇನೆ. ಮಾಧ್ಯಮದ ಮುಂದೆ ಎಲ್ಲ ಹೇಳಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಎಲ್ಲವೂ ಗೊತ್ತಾಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.
ಒಬ್ಬ ಸಚಿವನಾಗಿ ನನ್ನ ಅಧಿಕಾರದಲ್ಲಿ ಬೇರೆಯವರು ಮೂಗು ತೂರಿಸುವುದು ಸರಿಯಲ್ಲ. ಇದನ್ನು ನಾನು ಸೂಕ್ಷ್ಮವಾಗಿ ಹೇಳಿದ್ದೇನೆ. ಅರ್ಥ ಮಾಡಿಕೊಳ್ಳಿ. ನನ್ನ ಮಗ ನನ್ನ ಅಧಿಕಾರ ಚಲಾಯಿಸಿದರೆ ಒಪ್ಪಲ್ಲ ಎಂದು ಪರೋಕ್ಷವಾಗಿ ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಅವರ ವಿರುದ್ಧ ಅಸಮಾಧಾನ ಹೊರ ಹಾಕಿದರು.
ಪಕ್ಷದಲ್ಲಿ ಕೆಲ ಸ್ನೇಹಿತರು ನನ್ನ ವಿರುದ್ಧ ಮಾತನಾಡುತ್ತಿರುವುದೂ ಗೊತ್ತು. ಅದಕ್ಕೆ ಯಾರ ಕುಮ್ಮಕ್ಕಿದೆ ಎಂಬುದೂ ಗೊತ್ತು, ಮುಂದಿನ ದಿನಗಳನ್ನು ಗಮನದಲ್ಲಿಟ್ಟುಕೊಂಡು ವರಿಷ್ಠರಿಗೆ ಕೆಲ ವಿಚಾರವನ್ನು ತಿಳಿಸಿದ್ದೇನೆ ಎಂದರು.
ಶಾಸಕ ಸರವಿಂದ ಬೆಲ್ಲದ್ ದೆಹಲಿಗೆ
ಹೋಗಿದ್ದು ಗೊತ್ತಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಹೇಳಿದರು.