ಸಿಎಂ ಬದಲಾವಣೆ ಚರ್ಚೆಯಾಗಿಲ್ಲ

ಬೆಂಗಳೂರು,ಜೂ,೧೦- ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಹೈ ಕಮಾಂಡ್ ಮಟ್ಟದಲ್ಲಿ ಯಾವ ಚರ್ಚೆಗಳು ನಡೆದಿಲ್ಲ. ನಾಯಕತ್ವ ಬದಲಾವಣೆ ಊಹಾ-ಪೋಹಾ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್‌ಸಿಂಗ್ ಖಡಾತುಂಡವಾಗಿ ಹೇಳಿದ್ದಾರೆ.
ನವದೆಹಲಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಕೋವಿಡ್ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಅವರ ಕಾರ್ಯದ ಬಗ್ಗೆ ವರಿಷ್ಠರಿಗೆ ತೃಪ್ತಿ ಇದೆ. ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗುತ್ತಾರೆ ಎಂಬ ಸುದ್ದಿಗಳು ಕಾಲ್ಪಾನಿಕ.ಅಂತಹ ಯಾವುದೇ ಪ್ರಸ್ತಾವ ಇಲ್ಲ. ಈ ಬಗ್ಗೆ ವರಿಷ್ಠರು ಚರ್ಚೆಗಳನ್ನೇ ನಡೆಸಿಲ್ಲ ಎಂದು ಅವರು ಹೇಳಿದರು.
ಪದೇ ಪದೇ ಯಡಿಯೂರಪ್ಪನವರ ಬದಲಾವಣೆ ಮಾತು ಕೇಳಿ ಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇವೆಲ್ಲ ಊಹಾ-ಪೋಹಾ ಎಂದರು.
ಕರ್ನಾಟಕದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರನ್ನು ಬದಲಿಸುವ ಪ್ರಶ್ನೆಯೇ ಇಲ್ಲ. ಇದೂ ಸಹ ಕಾಲ್ಪಾನಿಕ. ರಾಜ್ಯಾಧ್ಯಕ್ಷರಾಗಿ ನಳೀನ್ ಕುಮಾರ್ ಕಟೀಲು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ರಾಜ್ಯಕ್ಕೆ ಭೇಟಿ
ಈ ತಿಂಗಳ ೧೭ ಇಲ್ಲವೆ ೧೮ ರಂದು ಬೆಂಗಳೂರಿಗೆ ತೆರಳುತ್ತಿದ್ದೇನೆ. ಮೂರು ದಿನ ಕರ್ನಾಟಕದಲ್ಲೇ ಇದ್ದು, ಶಾಸಕರುಗಳ ಅಹವಾಲುಗಳನ್ನು ಆಲಿಸುತ್ತೇನೆ. ಸಮಸ್ಯೆಗಳಿದ್ದರೆ ಬಗೆಹರಿಸಲಾಗುವುದು ಎಂದರು.
ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಯಾರೂ ಪರ-ವಿರೋಧ ಹೇಳಿಕೆಗಳನ್ನು ನೀಡದಂತೆ ಈಗಾಗಲೇ ಸಚಿವರು, ಶಾಸಕರು, ಮುSಂಡರುಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಅವರು ಹೇಳಿದರು.