ಸಿಎಂ, ನಿರಾಣಿಗೆ ರಾಜೀನಾಮೆಗೆ ಕೈ ಆಗ್ರಹ

ಮೈಸೂರು,ಮಾ.೨೩- ಹೂವಿನ ನಾಯಕನ ಹಳ್ಳಿ ಡಿನೋಟಿಫೈ ಪ್ರಕರಣ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಮ್ಮಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಒತ್ತಾಯಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿನೋಟಿಪೈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ.ಎಸ್ ಯಡಿಯೂರಪ್ಪ ಮತ್ತು ಕೈಗಾರಿಕಾ ಸಚಿವರ ವಿರುದ್ಧ ಸಲ್ಲಿಸಲಾಗಿದ್ದ ದೂರಿನ ಸಂಬಂಧ ಬಿ.ರಿಪೋರ್ಟ್ ಸಲ್ಲಿಸಿದ್ದನ್ನು ಪುನರ್ ಪರಿಶೀಲಿಸಲು ನ್ಯಾಯಾಲಯ ಆದೇಶಿಸಿದೆ. ಈ ಕೂಡಲೇ ಬಿಎಸ್‌ವೈ ಮತ್ತು ಸಚಿವ ಮುರುಗೇಶ್ ನಿರಾಣಿ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು ಎಂದು ಹೇಳಿದರು.
ಮುಖ್ಯಮಂತ್ರಿಗಳ ವಿರುದ್ಧ ಈಗಾಗಲೇ ಆರೋಪಪಟ್ಟಿ ದಾಖಲಿಸಲಾಗಿದೆ.ಇದರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ ನಿರ್ದೋಷಿ ಎಂದು ಸಾಬೀತಾದರೆ ಮುಖ್ಯಮಂತ್ರಿ ಬದಲಾಗಿ ಪ್ರಧಾನಮಂತ್ರಿಯನ್ನಾಗಿ ಮಾಡಲಿ ಎಂದು ವ್ಯಂಗ್ಯವಾಡಿದರು.
ಮೈಸೂರಿನಲ್ಲಿ ಫಿಲಂಸಿಟಿ ನಿರ್ಮಾಣ ಕುರಿತು ಪ್ರತಿಕ್ರಿಯಿಸಿದ ಅವರು, ೨೦೧೫ರಲ್ಲೇ ಫಿಲಂ ಸಿಟಿಯನ್ನು ಮೈಸೂರಿನಲ್ಲೇ ನಿರ್ಮಾಣ ಮಾಡುವುದಾಗಿ ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು.ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಫಿಲಂಸಿಟಿಯನ್ನು ಬೆಂಗಳೂರಿಗೆ ಸ್ಥಳಾಂತರಿಸಿ ಮೈಸೂರಿನ ಕೆಂಗಣ್ಣಿಗೆ ಗುರಿಯಾಗಿದ್ದರು ಎಂದರು.