ಆ. 1 ಸಿಎಂ ಉಡುಪಿ, ದ.ಕನ್ನಡ ಭೇಟಿ: ಮಳೆ ಹಾನಿ ವೀಕ್ಷಣೆ

ಬೆಂಗಳೂರು,ಜು.೩೦:ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮಳೆಪೀಡಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಆ. ೧ ರಂದು ಭೇಟಿ ನೀಡಿ ಮಳೆಯಿಂದ ಉದ್ಭವಿಸಿರುವ ಪರಿಸ್ಥಿತಿಂiiನ್ನು ವೀಕ್ಷಿಸುವರು. ಮಳೆಯಿಂದ ಹಾನಿಗೊಳಗಾಗಿರುವ ಜಿಲ್ಲೆಗಳಿಗೆ ಪ್ರವಾಸ ನಡೆಸುವುದಾಗಿ ಹೇಳಿದ್ದ ಮುಖ್ಯಮಂತ್ರಿಗಳು, ೪ ದಿನಗಳ ಹಿಂದೆ ಹಾವೇರಿ ಜಿಲ್ಲೆಗೆ ಭೇಟಿ ನೀಡಿ ಮಳೆಯಿಂದಾಗಿರುವ ಹಾನಿಯನ್ನು ವೀಕ್ಷಿಸಿ ಅಧಿಕಾರಿಗಳ ಸಭೆ ನಡೆಸಿ ಸಲಹೆ ಸೂಚನೆಗಳನ್ನು ನೀಡಿದ್ದರು.
ಉಡುಪಿಯಲ್ಲಿ ವಿದ್ಯಾರ್ಥಿನಿಯ ವೀಡಿಯೊ ಪ್ರಕರಣದ ಸದ್ದು ಮಾಡುತ್ತಿರುವಾಗಲೇ ಮುಖ್ಯಮಂತ್ರಿಗಳ ಉಡುಪಿ ಭೇಟಿ ಕುತೂಹಲ ಮೂಡಿಸಿದೆ.
ಇದೇ ಆ. ೧ ರಂದು ಭಾರಿ ಮಳೆಯಾಗಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿರುವ ಮುಖ್ಯಮಂತ್ರಿಗಳು, ಮೊದಲು ಉಡುಪಿ ಜಿಲ್ಲೆಗೆ ತೆರಳಿ ಅಲ್ಲಿನ ಸ್ಥಿತಿಗತಿಗಳನ್ನು ವೀಕ್ಷಿಸಿ ಉಡುಪಿ ಜಿಲ್ಲಾಪಂಚಾಯತ್ ಕಚೇರಿಯಲ್ಲಿ ನಡೆಯಲಿರುವ ಜಿಲ್ಲೆ ಪ್ರಗತಿಪರಿಶೀಲನಾ ಸಭೆ ನಡೆಸುವರು. ಅದಾದ ನಂತರ ಮಂಗಳೂರಿಗೆ ಆಗಮಿಸಿ ಮಂಗಳೂರಿನ ಜಿಲ್ಲಾ ಪಗತಿ ಪರೀಶೀಲನೆ ನಡೆಸಿ ರಾತ್ರಿ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸಲಿದ್ದಾರೆ.
ಇತ್ತೀಚೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಭಾರಿ ಮಳೆಯಾಗಿ ಪ್ರವಾಹ ಪರಿಸ್ಥಿತಿ ತಲೆದೋರಿತ್ತು. ಪ್ರವಾಹದಿಂದ ಹಾನಿಗೊಳಗಾಗಿರುವ ಪ್ರದೇಶಗಳಲ್ಲಿ ಏನ್ನೆಲ್ಲ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂಬ ಬಗ್ಗೆ ಮುಖ್ಯಮಂತ್ರಿಗಳು ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವ ಜತೆಗೆ ಮಳೆಯಿಂದ ತೊಂದರೆಗೊಳಗಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ವಸ್ತುಸ್ಥಿತಿಯನ್ನು ಪರಿಶೀಲಿಸುವರು.
ವೀಡಿಯೊ ಪ್ರಕರಣ ಮಾಹಿತಿ
ಉಡುಪಿಯ ಮಳೆಹಾನಿ ವೀಕ್ಷಿಸಲು ತೆರಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರವರು ವಿದ್ಯಾರ್ಥಿನಿಯರ ವೀಡಿಯೊ ಪ್ರಕರಣದ ಬಗ್ಗೆಯೂ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುವ ಸಾಧ್ಯತೆಗಳಿವೆ.