ಸಿಎಂ ದೆಹಲಿ ಪ್ರವಾಸ ಆಗಸ್ಟ್ ಮೊದಲ ವಾರ ಸಂಪುಟ ವಿಸ್ತರಣೆ ನಿರೀಕ್ಷೆ

ಬೆಂಗಳೂರು, ಜು.೨೪- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಳಿಗ್ಗೆ ದೆಹಲಿಗೆ ತೆರಳಿದ್ದು, ಮೂರು ದಿನ ದೆಹಲಿಂiiಲ್ಲೇ ಉಳಿಯುವ ಮುಖ್ಯಮಂತ್ರಿಗಳು, ಸಂಪುಟ ವಿಸ್ತರಣೆಗೆ ವರಿಷ್ಠರ ಹಸಿರು ನಿಶಾನೆ ಪಡೆಯಲಿದ್ದು, ಆಗಸ್ಟ್ ಮೊದಲ ವಾರದಲ್ಲಿ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗುವ ಸಾಧ್ಯತೆಗಳಿವೆ.
ಮುಖ್ಯಮಂತ್ರಿಗಳು ಪ್ರತಿಬಾರಿ ದೆಹಲಿಯಾತ್ರೆ ಕೈಗೊಂಡಾಗ ಸಂಪುಟ ವಿಸ್ತರಣೆ ಆಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿದ್ದರೂ ಸಂಪುಟ ವಿಸ್ತರಣೆ ಮಾತ್ರ ಕಾರ್ಯರೂಪಕ್ಕೆ ಬರದೆ ಸಂಪುಟ ವಿಸ್ತರಣೆ ಯಾವಾಗ ಎಂಬುದು ನಾಳೆ ಬಾ ಎಂಬಂತಾಗಿತ್ತು. ಆದರೆ, ಈ ಬಾರಿ ಮಾತ್ರ ಮುಖ್ಯಮಂತ್ರಿಗಳು ವರಿಷ್ಠರ ಮನವೊಲಿಸಿ ಸಂಪುಟ ವಿಸ್ತರಣೆಗೆ ಒಪ್ಪಿಗೆ ಪಡೆಯಲಿದ್ದಾರೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಬಲವಾಗಿದೆ.
ಮುಖ್ಯಮಂತ್ರಿಗಳ ದೆಹಲಿ ಭೇಟಿ ಫಲಪ್ರದವಾಗಲಿದ್ದು, ಆಗಸ್ಟ್ ಮೊದಲ ವಾರದಲ್ಲಿ ಸಂಪುಟ ವಿಸ್ತರಣೆಯಾಗಲಿದೆ ಎಂಬುದು ಮುಖ್ಯಮಂತ್ರಿಗಳ ಆಪ್ತ ಮೂಲಗಳು ಹೇಳಿವೆ.
ಗುತ್ತಿಗೆದಾರ ಸಂತೋಷ್‌ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕ್ಲೀನ್‌ಚಿಟ್ ಪಡೆದಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಸಂಪುಟ ಸೇರ್ಪಡೆ ನಿಶ್ಚಿತವಾಗಿದ್ದು, ಇವರ ಜತೆಗೆ ರಾಸಲೀಲೆ ಪ್ರಕರಣದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಮೇಶ್‌ಜಾರಕಿಹೊಳಿ ಸಹ ಸಂಪುಟಕ್ಕೆ ಮರು ಸೇರ್ಪಡೆಯಾಗುವ ಸಾಧ್ಯತೆಗಳಿವೆ. ಹಾಗೆಯೇ ಹಿರಿಯ ಶಾಸಕ ಬಸನಗೌಡ ಪಾಟೀಲ್‌ಯತ್ನಾಳ್, ಕುಡುಚಿಯ ಶಾಸಕ ಪಿ. ರಾಜೀವ್, ವಿಧಾನ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ಸಂಪುಟ ಸೇರುವ ಪಟ್ಟಿಯಲ್ಲಿದ್ದಾರೆ.
ಒಂದು ವೇಳೆ ರಮೇಶ್‌ಜಾರಕಿ ಹೊಳಿ ಸಂಪುಟ ಸೇರ್ಪಡೆಯಾಗದಿದ್ದರೆ ಶಾಸಕ ರಾಜುಗೌಡ, ಇಲ್ಲವೆ ಎಸ್.ಎ ರಾಮ್‌ದಾಸ್‌ಗೆ ಅದೃಷ್ಟ ಖುಲಾಯಿಸಬಹುದು.
ವಿಧಾನಸಭಾ ಚುನಾವಣೆಗೆ ೭-೮ ತಿಂಗಳಷ್ಟೇ ಬಾಕಿ ಇರುವ ಈ ಸಂದರ್ಭದಲ್ಲಿ ಸಂಪುಟ ಪುನಾರಚನೆಯ ಬದಲು ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳಲ್ಲಿಷ್ಟೇ ಭರ್ತಿ ಮಾಡಿಕೊಳ್ಳಲು ಮುಖ್ಯಮಂತ್ರಿಗಳು ತೀರ್ಮಾನಿಸಿದ್ದು, ಅದರಂತೆ ಐವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ನಾಳೆ ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಇವರ ಜತೆ ಚರ್ಚಿಸಿ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿ ಮಾಡುವರು.
ಸಂಪುಟಕ್ಕೆ ಯಾರನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂಬ ಪಟ್ಟಿಯನ್ನು ಮುಖ್ಯಮಂತ್ರಿಗಳು ದೆಹಲಿಗೆ ಕೊಂಡೊಯ್ದಿದ್ದು ಆ ಪಟ್ಟಿಯನ್ನು ವರಿಷ್ಠರಿಗೆ ನೀಡಿ ಸಂಪುಟ ವಿಸ್ತರಣೆಗೆ ಒಪ್ಪಿಗೆ ಪಡೆಯುವರು.
ಸಚಿವ ಸಂಪುಟ ವಿಸ್ತರಣೆಗ ಮುಹೂರ್ತ ನಿಗಮ ಮಂಡಳಿ ಅಧ್ಯಕ್ಷ- ಉಪಾಧ್ಯಕ್ಷ ನೇಮಕಾತಿ ಪಟ್ಟಿಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವರಿಷ್ಠರ ಅನುಮತಿ ಪಡೆಯಲಿದ್ದು, ಈ ತಿಂಗಳಾಂತ್ಯದೊಳಗೆ ನಿಗಮ ಮಂಡಳಿಗಳಿಗೆ ಹೊಸ ಅಧ್ಯಕ್ಷರುಗಳ ನೇಮಕವಾಗುವುದು ಬಹುತೇಕ ನಿಶ್ಚಿತ.