ಸಿಎಂ ದಾವೋಸ್ ಪ್ರವಾಸ ಇಂದು ನಿರ್ಧಾರ

ಬೆಂಗಳೂರು,ಮೇ ೧೪- ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ದಾವೋಸ್‌ನಲ್ಲಿ ನಡೆಯುವ ವಿಶ್ವ ಶೃಂಗ ಸಭೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ತೀರ್ಮಾನ ಮಾಡಲಿದ್ದಾರೆ.
ಈ ಹಿಂದೆ ನಿಗದಿಯಾದಂತೆ ಮುಖ್ಯಮಂತ್ರಿಗಳು ಮೇ ೧೯ ರಂದು ದಾವೋಸ್ ಪ್ರವಾಸಕ್ಕೆ ತೆರಳಿ ೨೪ ರಂದು
ವಾಪಸ್ಸಾಗಬೇಕಿತ್ತು. ಆದರೆ, ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಪ್ರವಾಸವನ್ನು ಮೊಟಕುಗೊಳಿಸಲು ಮುಖ್ಯಮಂತ್ರಿಗಳು ತೀರ್ಮಾನಿಸಿದ್ದಾರೆ.
ದಾವೋಸ್‌ನಲ್ಲಿ ಈ ತಿಂಗಳ ೨೧ ರಂದು ವಿಶ್ವ ಆರ್ಥಿಕ ಶೃಂಗಸಭೆ ನಿಗದಿಯಾಗಿದೆ.
ದೇಶದಲ್ಲಿ ಎರಡು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಆಹ್ವಾನ ಬಂದಿದೆ. ಅದರಲ್ಲಿ ತಾವೂ ಸಹ ಒಬ್ಬರು. ಹಾಗಾಗಿ, ದಾವೋಸ್‌ಗೆ ತೆರಳುವ ಬಗ್ಗೆ ಇಂದು ತೀರ್ಮಾನ ಮಾಡುತ್ತೇನೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ವಿಧಾನ ಪರಿಷತ್ ರಾಜ್ಯಸಭಾ ಚುನಾವಣೆ ಇರುವುದರಿಂದ ದಾವೋಸ್‌ಗೆ ಯಾವಾಗ ತೆರಳಬೇಕು ಹಾಗೂ ಅಲ್ಲಿಂದ ಯಾವಾಗ ಹಿಂದಿರುಗಬೇಕು ಎಂಬುದನ್ನು ತೀರ್ಮಾನಿಸುವುದಾಗಿ ಹೇಳಿದರು.
ಕೋರ್‌ಕಮಿಟಿ ಸಭೆ
ರಾಜ್ಯಸಭೆ ಹಾಗೂ ವಿಧಾನಸಭೆಯ ಗೆಲುವಿನ ರಣತಂತ್ರ ರೂಪಿಸಲು ಇಂದು ಬಿಜೆಪಿ ಕಚೇರಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಕೋರ್‌ಕಮಿಟಿ ಸಭೆ ನಡೆಯಲಿದೆ.
ಈ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಸಹ ಪಾಲ್ಗೊಳ್ಳುವರು ಎಂದರು.
ಈ ಸಭೆಯಲ್ಲಿ ರಾಜ್ಯಸಭಾ ಹಾಗೂ ವಿಧಾನ ಪರಿಷತ್ ಚುನಾವಣೆಗೆ ಯಾರನ್ನು ಅಭ್ಯರ್ಥಿಯನ್ನಾಗಿಸಬೇಕು ಎಂಬ ಬಗ್ಗೆಯೂ ಚರ್ಚೆಗಳು ನಡೆಯಲಿವೆ ಎಂದರು.