
ಬೆಂಗಳೂರು,ಏ.೨೨:ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ ಮಾಡಲು ಬಿಜೆಪಿ ಷಡ್ಯಂತ್ರ ನಡೆಸಿದ್ದರು ಎಂಬ ವಿಚಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರ ನಡುವೆ ವಾಕ್ಸಮರಕ್ಕೆ ಕಾರಣವಾಗಿದ್ದು, ಡಿಕೆಶಿ ವಿನಾಃಕಾರಣ ಆರೋಪ ಮಾಡುತ್ತಿದ್ದಾರೆ. ನಾಮಪತ್ರ ಪರೀಶೀನೆ ಮುಗಿದು ಕಾಂಗ್ರೆಸ್ ಅಭ್ಯರ್ಥಿಯ ಯಾವುದೇ ನಾಮಪತ್ರ ತಿರಸ್ಕೃತ ಆಗದಿದ್ದರೂ ಡಿಕೆಶಿ ಆರೋಪ ಮಾಡುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುಡುಗಿದ್ದರೆ, ಡಿ.ಕೆ ಶಿವಕುಮಾರ್ ನಾಮಪತ್ರ ತಿರಸ್ಕೃತ ಮಾಡಲು ಬಿಜೆಪಿ ಷಡ್ಯಂತ್ರ ನಡೆಸಿತ್ತು ಎಂದು ಮತ್ತೆ
ಪುನರುಚ್ಛರಿಸಿದ್ದಾರೆ.ಬೆಂಗಳೂರಿನಲ್ಲಿಂದು ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರಗಳನ್ನು ತಿರಸ್ಕರಿಸಲು ಬಿಜೆಪಿಯವರು ಷಡ್ಯಂತ್ರ ನಡೆಸಿದ್ದರು. ಮುಖ್ಯಮಂತ್ರಿ ಕಚೇರಿಯಿಂದಲೇ ಈ ಷಡ್ಯಂತ್ರ ನಡೆದಿದೆ ಎಂದು ಗಂಭೀರ ಆರೋಪ ಮಾಡಿದರು. ಆದರೆ, ಇದನ್ನು ಮುಖ್ಯಮಂತ್ರಿಗಳು ಅಲ್ಲಗಳೆದು ಮಾಡಲು ಕೆಲಸವಿಲ್ಲದೆ ಡಿ.ಕೆ. ಶಿವಕುಮಾರ್ ಈ ರೀತಿ ಮತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಈ ವಿಚಾರ ಇಬ್ಬರ ನಡುವೆ ಮಾತಿನ ಚಕಮಕಿಗೆ ಕಾರಣವಾಗಿದೆ.
ಯಾರು ಏನು ಮಾತನಾಡಿದರು
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಬೊಮ್ಮಾಯಿ ಅವರು ಅಧಿಕಾರ ದುರುಪಯೋಗ ಮಾಡಿಕೊಂಡು ಷಡ್ಯಂತ್ರ ನಡೆಸಿದ್ದರು ಎಂದು ದೂರಿ ಬಿಜೆಪಿ ಕಾನೂನು ವಿಭಾಗವನ್ನು ಸಜ್ಜುಮಾಡಿಕೊಂಡು ಕಾಂಗ್ರೆಸ್ ಅಭ್ಯರ್ಥಿಗಳ ಅಫಿಡೆವಿಟ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ.ಏನಾದರು ಮಾಡಿ ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರವನ್ನು ತಿರಸ್ಕೃತಗೊಳಿಸುವ ಷಡ್ಯಂತ್ರ ನಡೆದಿದೆ ಎಂದರು.
ಇಷ್ಟೊಂದು ಅಫಿಡೆವಿಟ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಕಾರಣವೇನು. ಇದರ ಅರ್ಥ ನಾಮಪತ್ರ ರಿಜೆಕ್ಟ್ ಮಾಡಿಸುವ ಉದ್ದೇಶ ಎಂದು ಅವರು ಆರೋಪಿಸಿದರು.ಮುಖ್ಯಮಂತ್ರಿಗಳ ಕಚೇರಿಯಿಂದಲೇ ಚುನಾವಣಾಧಿಕಾರಿಗಳಿಗೆ ದೂರವಾಣಿ ಕರೆ ಹೋಗಿದೆ. ಕಾಲ್ ಡೀಟೆಲ್ಸ್ ತೆಗೆದು ತನಿಖೆ ನಡೆಸಲಿ ಎಲ್ಲವೂ ಹೊರಬರುತ್ತದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.ಕನಕಪುರದಲ್ಲಿ ನನ್ನ ಅಫಿಡವಿಟ್‌ನ್ನೇ ತಿರಸ್ಕೃತಗೊಳಿಸುವ ಸಂಚು ನಡೆಸಿದ್ದರು. ಹೀಗಿರುವಾಗ ನಮ್ಮ ಪಕ್ಷದ ಮೇಲೆ ಷಡ್ಯಂತ್ರ ಮಾಡಿದ್ದಾರೆ ಎಂದು ದೂರಿದರು.
ಬಿಜೆಪಿ ಅಭ್ಯರ್ಥಿಗಳ ನಾಮಪತ್ರಗಳಲ್ಲೇ ಸಮಸ್ಯೆ ಇದೆ. ಉದಾಹರಣೆಗೆ ಸವದತ್ತಿಯಲ್ಲೇ ಬಿಜೆಪಿ ಅಭ್ಯರ್ಥಿಯದ್ದು ಸಮಸ್ಯೆಯಾಗಿದೆ. ಬಿಜೆಪಿ ಅಭ್ಯರ್ಥಿಗಳ ನಾಮಪತ್ರಗಳಿಗೆ ಅಡ್ಡಿಯಾಗದಂತೆ ನೋಡಿಕೊಳ್ಳುವ ಬಗ್ಗೆ ಮುಖ್ಯಮಂತ್ರಿ ಕಚೇರಿಯಿಂದಲೇ ಒತ್ತಡ ಹಾಕಿದ್ದಾರೆ ಎಂದರು.
ಅಧಿಕಾರಿಗಳು ಯಾವುದೇ ಒತ್ತಡದಿಂದ ಕೆಲಸ ಮಾಡದ ರೀತಿ ಚುನಾವಣಾ ಆಯೋಗ ಆದೇಶ ಮಾಡಬೇಕು. ಈ ಬಗ್ಗೆ ಚುನಾವಣಾ ಆಯೋಗಕ್ಕೂ ಮನವಿ ಮಾಡುತ್ತೇನೆ ಎಂದು ಅವರು ಹೇಳಿದರು.
ಶೋಭಾಗೆ ತಿರುಗೇಟು
ಕಾಂಗ್ರೆಸ್ ಅಭ್ಯರ್ಥಿಗಳಿಂದ ಹಣ ಪಡೆದು ಬಿ ಫಾರಂ ನೀಡಲಾಗಿದೆ ಎಂಬ ಶೋಭಾಕರಂದ್ಲಾಜೆ ಆರೋಪಕ್ಕೆ ತಿರುಗೇಟು ನೀಡಿದ ಅವರು, ಬಿಲ್ಡಿಂಗ್ ಫಂಡ್ ಎಂದು ಹಣ ಪಡೆದಿದ್ದೇವೆ. ನಾವೇನೂ ಶೇ. ೪೦ ರಷ್ಟು ಕಮಿಷನ್ ಪಡೆದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಖರ್ಗೆ ಅವರನ್ನು ಎಂ.ವಿ ಪಾಟೀಲ್ ಮುಗಿಸುತ್ತಾರೆ ಎಂಬ ಶೋಭಾಕರಂದ್ಲಾಜೆ ಹೇಳಿಕೆಗೆ ಕಿಡಿಕಾರಿದ ಅವರು, ಯಡಿಯೂರಪ್ಪರವರನ್ನು ಮುಗಿಸಲು ಬಿಜೆಪಿಯಲ್ಲಿ ಏನು ನಡೆದಿದೆ ಎಂಬುದು ಗೊತ್ತಿದೆ. ಇದರಲ್ಲಿ ಶೋಭಾಕರಂದ್ಲಾಜೆ ಸಹ ಸೇರಿದ್ದಾರೆ. ಅವರು ನಮ್ಮ ಬಗ್ಗೆ ಹೇಳಿದರೆ ನಾವು ಅವರ ಪಕ್ಷದಲ್ಲಿ ಯಡಿಯೂರಪ್ಪರವರನ್ನು ಮುಗಿಸಲು ಏನೆಲ್ಲ ಮಾಡುತ್ತಿದ್ದಾರೆ ಎಂಬುದನ್ನು ಬಿಚ್ಚಿಡುತ್ತೇವೆ ಎಂದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಮೇಲೆ ನಿಗಾ ಇಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜಗದೀಶ್ ಶೆಟ್ಟರ್ ನಮ್ಮ ನಾಯಕರು. ನಮ್ಮ ಪಕ್ಷದ ಸ್ಟಾರ್ ಪ್ರಚಾರಕ, ಅವರ ವಿರುದ್ಧ ಷಡ್ಯತ್ರ ನಡೆಯಲ್ಲ. ಬಿಜೆಪಿ ಡ್ಯಾಂ ಈಗಾಗಲೇ ಒಡೆದು ನೀರು ಬರುತ್ತಿದೆ. ಬಿಜೆಪಿ ಕೆರೆ, ಬಾವಿ ಎಲ್ಲ ನೀರು ಖಾಲಿಯಾಗುತ್ತಿದೆ ಎಂದು ವ್ಯಂಗ್ಯವಾಡಿದರು.
ಸಿಎಂ ತಿರುಗೇಟು
ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ತಿರಸ್ಕರಿಸಲು ಬಿಜೆಪಿ ಷಡ್ಯಂತ್ರ ನಡೆಸಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪ ನಿರಾಧಾರ, ಈಗಾಗಲೇ ನಾಮಪತ್ರ ಪರಿಶೀಲನೆ ನಡೆದು ಯಾವುದೇ ನಾಮಪತ್ರಗಳು ತಿರಸ್ಕೃತ ಆಗಿಲ್ಲ.ಹೀಗಿರುವಾಗ ಡಿಕೆಶಿ ಆರೋಪ ಸರಿಯಿಲ್ಲ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಇನ್ನೇನಿದೆ ಎಂದರು.ನಾಮಪತ್ರ ತಿರಸ್ಕೃತ ವಿಚಾರ ಎಲ್ಲವೂ ನಿನ್ನೆಯೇ ಮುಗಿದು ಹೋಗಿದೆ. ಅವರಿಗೆ ಬೇರೆ ವಿಷಯ ಇಲ್ಲ. ಅದಕ್ಕೆ ಇಂತದ್ದನ್ನೆಲ್ಲ ಮಾತನಾಡುತ್ತಾರೆ ಅಷ್ಟೇ ಎಂದರು.ನಾಮಪತ್ರ ಪರಿಶೀಲನೆ ಮುಗಿದಿರುವಾಗ ತಿರಸ್ಕೃತವಾಗುವ ಪ್ರಶ್ನೆ ಎಲ್ಲಿದೆ? ಡಿಕೆಶಿ ಏನೇನೋ ಮಾತನಾಡುತ್ತಿದ್ದಾರೆ ಎಂದು ಹರಿಹಾಯ್ದರು.
ನಾಮಪತ್ರ ಪರಿಶೀಲನೆಯ ಎಲ್ಲ ಪ್ರಕ್ರಿಯೆಗಳು ವೀಡಿಯೋ ಕವರೇಜ್ ಆಗಿದೆ. ಯಾವ ಪಕ್ಷವು ಏನು ಮಾಡೋಕೆ ಆಗೋದಿಲ್ಲ ಎಂದರು.
ಶೋಭಾಕರಂದ್ಲಾಜೆ ಸೇರಿದಂತೆ ಎಲ್ಲರೂ ಯಡಿಯೂರಪ್ಪರವರನ್ನು ಮುಗಿಸುತ್ತಾರೆ ಎಂಬ ಡಿಕೆಶಿ ಹೇಳಿಕೆಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ, ಇವರೆಲ್ಲ ಸೇರಿ ಸಿದ್ದರಾಮಯ್ಯರವರನ್ನು ಹೇಗೆ ಮುಗಿಸಿದ್ದಾರೆ ಎಂಬುದು ಗೊತ್ತಿಲ್ಲವಾ? ಕಳೆದ ಬಾರಿ ಚಾಮುಂಡೇಶ್ವರಿಯಲ್ಲಿ ಮುಗಿಸಿದರು. ಈ ಬಾರಿ ವರುಣಾದಲ್ಲಿ ಮುಗಿಸಲು ಏನು ಹುನ್ನಾರ ನಡೆಸಿದ್ದಾರೆ ಎಂಬುದು ಜಗತ್ತಿಗೆ ಗೊತ್ತಿದೆ ಎಂದರು.ಬಿಜೆಪಿಯ ಲಿಂಗಾಯತ ಡ್ಯಾಂ ಹೊಡೆದು ನೀರು ಕಾಂಗ್ರೆಸ್‌ಗೆ ಬರುತ್ತಿದೆ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಗುಂಡಿಯಲ್ಲಿ ನೀರೇ ಇಲ್ಲ, ಮೊದಲು ಅದನ್ನು ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.೨೦೧೩ರ ಚುನಾವಣೆಯಲ್ಲಿ ಲಿಂಗಾಯತರು ವಿಭಜನೆಯಾಗಿಲ್ಲ. ಅದು ರಾಜಕೀಯ ಪಕ್ಷವಾಯಿತು ಅಷ್ಟೆ, ಲಿಂಗಾಯತ ಮತದಾರರು ಪ್ರಬುದ್ಧರು ಡಿಕೆಶಿ ಹೇಳಿಕೆ ನಂತರ ಲಿಂಗಾಯತರು ಮತ್ತಷ್ಟು ಜಾಗೃತರಾಗಿ ಗಟ್ಟಿಯಾಗಿದ್ದಾರೆ ಎಂದರು.