ಸಿಎಂ ಗೋಮಾಂಸ ಹೇಳಿಕೆಗೆ ಸಿದ್ದು ತಿರುಗೇಟು

ಬೆಂಗಳೂರು,ಜ.13- ಗೋಮಾಂಸ ತಿನ್ನುವುದೇ ಮೈಸೂರು ಮುಖಂಡನ ಸಾಧನೆ ಎನ್ನವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿಕೆಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ತೀಕ್ಷ್ಮವಾಗಿ ತಿರುಗೇಟು ನೀಡಿದ್ದಾರೆ.

ನಾನು ಈವರೆಗೆ ಗೋಮಾಂಸವನ್ನು ತಿಂದಿಲ್ಲ. ಜನರ ದುಡ್ಡು ತಿಂದು ಜೈಲಿಗೆ ಹೋಗೋದೇ ಶಿವಮೊಗ್ಗ ಮುಖಂಡನ ಸಾಧನೆ ಎಂದು ಹೇಳಿಕೊಳ್ಳಲು ಅವರು ಯಾಕೋ ಮರೆತಿದ್ದಾರೆ ಎಂದು ಹರಿಹಾಯ್ದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು ಬಿಜೆಪಿವರು ಒಂದು ಕಡೆ ವಿಶ್ವಮಾನವರಾಗಿ ಅಂತನೂ ಹೇಳ್ತಾರೆ, ಇನ್ನೊಂದು ಕಡೆ ಕುರಿ, ಕೋಳಿ, ಗೋಮಾಂಸ ತಿನ್ನುವವರ ವಿರುದ್ಧ ದ್ವೇಷವನ್ನೂ ಕಾರುತ್ತಾರೆ ಎಂದು ಕಿಡಿ ಕಾರಿದ್ದಾರೆ.

ವಿಶ್ವಮಾನವನಾಗುವುದು ಎಂದರೆ ಪ್ರತಿ ವ್ಯಕ್ತಿಯ ಸಂಸ್ಕೃತಿ, ಆಹಾರ, ಆಚರಣೆಗಳನ್ನು ಗೌರವಿಸಿ, ಅವರಿದ್ದಂತೆ ಅವರನ್ನು ಒಪ್ಪಿಕೊಳ್ಳುವುದು ಎಂದರ್ಥ ಎಂದು ಅವರು ಹೇಳಿದ್ದಾರೆ.

ಹೇಳಿಕೆ ಹಾಸ್ಯಾಸ್ಪದ:

ಕಾಂಗ್ರೆಸ್ ಪಕ್ಷದ ಶಾಸಕರನ್ನು ಖರೀದಿಸಿ ಅವರ ಬಲದಿಂದ ಅಧಿಕಾರ ಅನುಭವಿಸುತ್ತಿರುವ ಯಡಿಯೂರಪ್ಪ ಅವರು ಕಾಂಗ್ರೆಸ್ ಪಕ್ಷಕ್ಕೆ ನಾಯಕರಿಲ್ಲ ಎಂದು ಹೇಳುತ್ತಿರುವುದು ತಮಾಷೆಯಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಸ್ವಂತಬಲದಲ್ಲಿ ಚುನಾವಣೆ ಗೆದ್ದು ಪೂರ್ಣಾವಧಿ ಸರ್ಕಾರ ನಡೆಸಿದ್ದು ಕಾಂಗ್ರೆಸ್ ಪಕ್ಷ. ಅವರೇನಾದರೂ ಒಂದೈದು ಪೂರ್ತಿ ವರ್ಷ ಮುಖ್ಯಮಂತ್ರಿಯಾಗಿದ್ದಾರಾ? ಎಂದು ಅವರು ಪ್ರಶ್ನಿಸಿದ್ದಾರೆ.

ಕೇಂದ್ರದ ಹಠಮಾರಿತನ:

ಕಳೆದ 48 ದಿನಗಳಿಂದ ದೆಹಲಿಯಲ್ಲಿ ರೈತರು ಮಳೆ, ಚಳಿ, ಹಸಿವು ಯಾವುದನ್ನೂ ಲೆಕ್ಕಿಸದೆ ಬೀದಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಅವರ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಾ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಹಠಮಾರಿ ಧೋರಣೆಯೇ ರೈತರ ಎಲ್ಲ ಕಷ್ಟ-ನಷ್ಟಗಳಿಗೆ ನೇರ ಕಾರಣ ಎಂದು ದೂರಿದ್ದಾರೆ.

ಸುಪ್ರೀಂ ಕೋರ್ಟ್ ಕೇಂದ್ರದ ನೂತನ ಕೃಷಿ ಕಾಯ್ದೆಗಳಿಗೆ ತಡೆ ನೀಡಿದೆಯೆಂದರೆ ಆ ಮಸೂದೆಗಳು ಸಂವಿಧಾನಕ್ಕೆ ವಿರುದ್ಧವಾಗಿವೆ ಎಂದರ್ಥ. ಅದೇ ನ್ಯಾಯಾಲಯ ರೈತರಿಗೆ ಪ್ರತಿಭಟನೆ ಮುಂದುವರೆಸಲು ಅವಕಾಶ ಕಲ್ಪಿಸಿ ತೀರ್ಪು ನೀಡಿದೆ ಎಂದರೆ ಅವರ ಬೇಡಿಕೆಗಳು ನ್ಯಾಯಬದ್ಧವಾಗಿವೆ ಎಂದರ್ಥ ಎಂದು ತಿಳಿಸಿದ್ದಾರೆ.

ಹೆಚ್. ವಿಶ್ವನಾಥ್ ಅವರು ತಮಗೆ ಲೋಕಸಭೆಗೆ ಟಿಕೆಟ್ ಕೊಡಿಸಿದ್ದು, 2008ರಲ್ಲಿ ವಿಧಾನಸಭೆಗೆ ಟಿಕೆಟ್ ಕೊಡಿಸಿದ್ದು ಯಾರು ಎಂಬುದನ್ನು ನೆನಪು ಮಾಡಿಕೊಂಡು ಹೇಳಲಿ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರಿಗೆ‌ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ

ಮೊದಲು ನೆನಪು ಮಾಡಿಕೊಂಡು ಆ ಮೇಲೆ ನನ್ನ ವಿರುದ್ಧ ಮಾತನಾಡಲಿ. ಕೃತಜ್ಞತೆ ಇಲ್ಲದೆ ಇರುವ ಕಾರಣಕ್ಕೆ ಯಡಿಯೂಪ್ಪ ಅವರೂ ಇವರನ್ನು ಮಂತ್ರಿ ಮಾಡಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.