
ಬೆಂಗಳೂರು,ಏ.೧೧:ಕಾಂಗ್ರೆಸ್ ಅಧಿಕಾರಕ್ಕೆ ಬರದಿದ್ದರೂ ಮುಖ್ಯಮಂತ್ರಿ ಹುದ್ದೆಗೆ ಮಾತ್ರ ಪೈಪೋಟಿ ನಡೆದಿದೆ. ಕಾಂಗ್ರೆಸ್‌ನಲ್ಲಿ ಈಗ ನಾಲ್ವರು ನಾಯಕರು ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ನಡೆಸಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಸಿಎಂ ಹುದ್ದೆಗೆ ಪೈಪೋಟಿ ಇದೆ. ಮೊದಲು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ನಡುವೆ ಪೈಪೋಟಿ ಇತ್ತು. ಈ ರೇಸ್‌ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖಗೇ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್‌ಸಹ ಸೇರ್ಪಡೆಯಾಗಿದ್ದಾರೆ ಎಂದರು.ಕಾಂಗ್ರೆಸ್ ಪಕ್ಷ ಏನೇ ಮಾಡಿದರೂ ಅಧಿಕಾರಕ್ಕೆ ಬರಲ್ಲ, ಆದರೆ, ಮುಖ್ಯಮಂತ್ರಿ ಹುದ್ದೆಗೆ ಮಾತ್ರ ಪೈಪೋಟಿ ಜೋರಾಗಿದೆ ಎಂದು ಗೇಲಿ ಮಾಡಿದರು.
ಈ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ, ಅಭಿವೃದ್ಧಿಯ ಅಜೆಂಡಾವನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದೇವೆ ಎಂದರು,
ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರದ ಉಜಾಲ ಯೋಜನೆ, ಜಲ ಜೀವನ್ ಮಿಷನ್. ಸ್ವಚ್ಛ ಭಾರತ್, ಸಂಧ್ಯಾ ಸುರಕ್ಷಾ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಸೇರಿದಂತೆ ವಿವಿಧ ಜನಪರ ಯೋಜನೆಗಳು ಜನರಿಗೆ ತಲುಪಿವೆ. ಜನ ಬಿಜೆಪಿಗೆ ಆರ್ಶೀವಾದ ಮಾಡಲಿದ್ದಾರೆ ಎಂದು ಅವರು ಹೇಳಿದರು.
ಸಿಆರ್‌ಪಿಎಫ್ ಪರೀಕ್ಷೆಯನ್ನು ಕನ್ನಡದಲ್ಲೇ ನಡೆಸಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಕನ್ನಡದಲ್ಲೇ ಪರೀಕ್ಷೆ ನಡೆಸಲು ಪ್ರಯತ್ನಗಳನ್ನು ನಾವು ನಡೆಸಿದ್ದೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪಟ್ಟಿ ಇಂದು ಬಿಡುಗಡೆ
ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಇಂದು ಸಂಜೆ ಬಿಡುಗಡೆಯಾಗಲಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯ ಆರಂಭದಲ್ಲಿ ಉಜಾಲ ಯೋಜನೆ, ಜಲಜೀವನ್ ಮಿಷನ್, ಸ್ವಚ್ಛ ಭಾರತ್ ಪ್ರಚಾರದ ಕಿರುಚಿತ್ರಗಳನ್ನು ಬಿಡುಗಡೆ ಮಾಡಲಾಯಿತು.