ಸಿಎಂ ಗದ್ದುಗೆಗೆ ತೆರೆಮರೆ ಪೈಪೋಟಿ

ಬೆಂಗಳೂರು, ಜು. ೨೨- ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವ ಸುಳಿವು ನೀಡುತ್ತಿದ್ದಂತೆಯೇ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಮುಂದಿನ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿಯೇ ನಡೆದಿದೆ. ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದ್ದು, ಸದ್ಯ ಕೇಂದ್ರ ಸಚಿವ ಪ್ರಹ್ಲಾದ್‌ಜೋಷಿ, ರಾಜ್ಯದ ಗಣಿ ಸಚಿವ ಮುರುಗೇಶ್ ನಿರಾಣಿ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಇವರುಗಳು ಮುಖ್ಯಮಂತ್ರಿ ಹುದ್ದೆಯ ರೇಸ್‌ನ ಮುಂಚೂಣಿಯಲ್ಲಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ರಾಜ್ಯದ ಗಣಿ ಸಚಿವ ಮುರುಗೇಶ್‌ನಿರಾಣಿ, ಬಿಜಾಪುರದ ಶಾಸಕ ಬಸನಗೌಡಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ, ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ್‌ನಾರಾಯಣ ಇವರುಗಳ ಹೆಸರು ಮುಖ್ಯಮಂತ್ರಿಯಾಗುವ ಪಟ್ಟಿಯಲ್ಲಿದೆಯಾದರು ಪ್ರಮುಖವಾಗಿ ಪ್ರಹ್ಲಾದ್ ಜೋಷಿ, ಸಿ.ಟಿ. ರವಿ ಹಾಗೂ ಮುರುಗೇಶ್ ನಿರಾಣಿ ಹೆಸರು ಪರಿಗಣನೆಯಲ್ಲಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಪ್ರಧಾನಿ ಮೋದಿ ಅವರಿಗೆ ಆಪ್ತರಾಗಿದ್ದು, ಕೇಂದ್ರ ಸಚಿವರಾಗಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಇವರನ್ನೇ ಮುಖ್ಯಮಂತ್ರಿಯಾಗಿಸಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆಯಾದರೂ ಸಚಿವ ಪ್ರಹ್ಲಾದ್ ಜೋಷಿ ಅವರಿಗೆ ಮುಖ್ಯಮಂತ್ರಿಯಾಗುವ ಮನಸ್ಸಿಲ್ಲ ಎನ್ನಲಾಗಿದೆ.
ಯಡಿಯೂರಪ್ಪನವರ ಸ್ಥಾನದಲ್ಲಿ ತಾವು ಮುಖ್ಯಮಂತ್ರಿಯಾದರೆ ಲಿಂಗಾಯತರ ವಿರೋಧ ಎದುರಿಸಬೇಕಾಗುತ್ತದೆ. ಮುಂದೆ ಅದು ಚುನಾವಣೆಯಲ್ಲಿ ಸೋಲಿಗೂ ಕಾರಣವಾಗಬಹುದು. ಹಾಗಾಗಿ ತಮಗೆ ಕೇಂದ್ರ ಸಚಿವ ಸ್ಥಾನವೇ ಸಾಕು ಎಂಬ ಮನಸ್ಥಿಯಲ್ಲಿ ಪ್ರಹ್ಲಾದ್ ಜೋಷಿ ಇದ್ದಾರೆ ಎನ್ನಲಾಗಿದೆ. ಆದರೂ ಹೈಕಮಾಂಡ್ ತೀರ್ಮಾನಿಸಿದರೆ ಜವಾಬ್ದಾರಿ ಹೊರಲು ಸಿದ್ಧ ಎಂಬ ಸಂದೇಶವನ್ನು ಅವರು ನೀಡಿದ್ದಾರೆ.
ಮುಖ್ಯಮಂತ್ರಿ ಹುದ್ದೆಗೆ ಪ್ರಮುಖವಾಗಿ ಕೇಳಿ ಬರುತ್ತಿರುವ ಸಚಿವ ಮುರುಗೇಶ್ ನಿರಾಣಿ ಅವರ ಹೆಸರು ಮುಂಚೂಣಿಯಲ್ಲಿದ್ದು ನಿರಾಣಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಅತ್ಯಾಪ್ತರಾಗಿದ್ದು, ರಾಜ್ಯದ ಪ್ರಬಲ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿದ್ದಾರೆ. ಇವರನ್ನು ಮುಖ್ಯಮಂತ್ರಿಯನ್ನಾಗಿಸಿದರೆ ಲಿಂಗಾಯತರ ವಿರೋಧ ತಣ್ಣಗಾಗಬಹುದು ಎಂಬ ಲೆಕ್ಕಾಚಾರವು ನಡೆದಿದೆ. ಇವರ ಜತೆಗೆ ಲಿಂಗಾಯತ ಸಮುದಾಯದಿಂದ ಬಸನಗೌಡಪಾಟೀಲ್ ಯತ್ನಾಳ್ ಹೆಸರು ಕೂಡ ಕೇಳಿ ಬಂದಿದ್ದು ಬಂಡಾಯ ಸ್ವಭಾವದ ಯತ್ನಾಳ್ ಅವರನ್ನು ಮುಖ್ಯಮಂತ್ರಿಯನ್ನಾಗಿಸಿದರೆ ಸಂಭಾಳಿಸುವುದು ಕಷ್ಟ ಎಂಬುದು ವರಿಷ್ಠರ ನಿಲುವಾಗಿದೆ.
ಸಂಘ ಪರಿವಾರದ ಬೆಂಬಲ ಹೊಂದಿರುವ ಸಿ.ಟಿ. ರವಿ ಅವರ ಹೆಸರು ಮುಖ್ಯಮಂತ್ರಿ ಹುದ್ದೆಯ ಮುಂಚೂಣಿಯಲ್ಲಿದೆ. ಪಕ್ಷ ನಿಷ್ಠ ಮತ್ತು ಸಂಘ ನಿಷ್ಠ ಸಿ.ಟಿ. ರವಿ ಅವರಿಗೆ ಆರ್‌ಎಸ್‌ಎಸ್ ನಾಯಕರ ಕೃಪಾಶೀರ್ವಾದವಿದ್ದು, ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಿ ಎಂದು ಆರ್‌ಎಸ್‌ಎಸ್ ನಾಯಕರು ಬಿಜೆಪಿ ವರಿಷ್ಠರಿಗೆ ಹೇಳಿದ್ದಾರೆ ಎನ್ನಲಾಗಿದೆ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೆಸರು ಮುಖ್ಯಮಂತ್ರಿ ಹುದ್ದೆಗೆ ಕೇಳಿ ಬಂದಿದ್ದಾರೂ ಅದಕ್ಕೆ ಪ್ರಧಾನಿ ಮೋದಿ ಒಪ್ಪಿಲ್ಲ ಎನ್ನಲಾಗಿದ್ದು, ತಮಗೆ ಮುಖ್ಯಮಂತ್ರಿ ಹುದ್ದೆ ಸಿಗುವುದಿಲ್ಲ ಎಂದು ಖಾತ್ರಿಯಾದ ಹಿನ್ನೆಲೆಯಲ್ಲಿ ಬಿ.ಎಲ್. ಸಂತೋಷ್ ಅವರು ಉತ್ತರಖಾಂಡ್‌ಗೆ ತೆರಳಿದ್ದಾರೆ.
ಉಳಿದಂತೆ ಮುಖ್ಯಮಂತ್ರಿ ಹುದ್ದೆಗೆ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ್‌ನಾರಾಯಣ, ಶಾಸಕ ಅರವಿಂದ್ ಬೆಲ್ಲದ್ ಅವರ ಹೆಸರು ಇರುವುದಾದರೂ ಅಂತಿಮವಾಗಿ ಹೈಕಮಾಂಡ್ ಯಾರನ್ನು ಆಯ್ಕೆ ಮಾಡುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಸದ್ಯಕ್ಕಂತೂ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ರಾಜ್ಯದ ಗಣಿ ಸಚಿವ ಮುರುಗೇಶ್ ನಿರಾಣಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ಹೆಸರು ಹೆಚ್ಚು ಪ್ರಬಲವಾಗಿದೆ.
ಮೂವರು ಉಪಮುಖ್ಯಮಂತ್ರಿಗಳು
ಮುಂದೆ ಸಚಿವರಾದ ಬಸವರಾಜಬೊಮ್ಮಾಯಿ, ಶ್ರೀರಾಮುಲು, ಸಿ.ಪಿ. ಯೋಗೇಶ್ವರ್ ಈಗಿರುವ ಉಪಮುಖ್ಯಮಂತ್ರಿಗಳ ಜತೆಗೆ ಹೊಸದಾಗಿ ಉಪಮುಖ್ಯಮಂತ್ರಿಗಳಾಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.