ಸಿಎಂ ಕುರ್ಚಿ ಖಾಲಿ ಇಲ್ಲ: ಸಿದ್ದುಗೆ ಬೈರತಿ ತಿರುಗೇಟು

ಹುಬ್ಬಳ್ಳಿ,ಜ೭: ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಇನ್ನೂ ಎರಡೂವರೆ ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದು, ಸದ್ಯ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ತಿಳಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಖಚಿತ ಎಂಬ ಹೇಳಿಕೆ ನೀಡಿದ್ದ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ಧರಾಮಯ್ಯ ಯಾವಾಗ ಜ್ಯೋತಿಷಿ ಆದರೋ ಎಂಬುದು ನನಗೆ ಗೊತ್ತಿಲ್ಲ ಎಂದರು.
ಕಾಂಗ್ರೆಸ್ ಪಕ್ಷ ಬಿಟ್ಟು ಹೋದವರು ಮತ್ತೆ ಮರಳಿ ಪಕ್ಷಕ್ಕೆ ಬರುತ್ತಾರೆ ಎಂಬ ಅವರ ಹೇಳಿಕೆ ಭ್ರಮೆಯಾಗಿದ್ದು, ನಾವು ಯಾರೂ ಕೂಡಾ ಮರಳಿ ಕಾಂಗ್ರೆಸ್ ಪಕ್ಷಕ್ಕೆ ಹೋಗಲ್ಲ ಎಂದು ಬಸವರಾಜ ಸ್ಪಷ್ಟಪಡಿಸಿದರು. ನಾವು ಕಾಂಗ್ರೆಸ್ ದೊರೆದು ಬಿಜೆಪಿಗೆ ಸೇರಿದ್ದು, ತತ್ವಸಿದ್ಧಾಂತಗಳನ್ನು ಒಪ್ಪಿ ಜೀವನಪರ್ಯಂತ ಬಿಜೆಪಿಯಲ್ಲಿಯೇ ಇರುತ್ತೇವೆ ಎಂದು ಕಡ್ಡಿ ಮುರಿದಂತೆ ಹೇಳಿದರು.
ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು, ಸಂಪುಟ ವಿಸ್ತರಣೆ ಮಾಡುವುದು ಅವರ ಪರಮಾಧಿಕಾರ ಎಂದ ಅವರು ನಮ್ಮ ಜೊತೆಗೆ ಬಂದವರಿಗೆ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ ಎಂದರು.
ಹುಬ್ಬಳ್ಳಿ ಧಾರವಾಡ ಅವಳಿನಗರ ಸ್ಮಾರ್ಟ್‌ಸಿಟಿ ಯೋಜನೆಯಡಿ ಕಾಮಗಾರಿಗಳು ನಡೆಯುತ್ತಿದ್ದು, ಕಾಮಗಾರಿ ಪರಿಪೂರ್ಣವಾಗಿ ಮುಕ್ತಾಯವಾಗಬೇಕಾದರೆ ಇನ್ನೂ ಒಂದೂವರೆ ವರ್ಷ ಕಾಲಾವಕಾಶ ಇದೆ ಎಂದು ಬೈರತಿಬಸವರಾಜ ತಿಳಿಸಿದರು.
೭೭ ಕೋಟಿ ರೂ. ವೆಚ್ಚದಲ್ಲಿ ಅವಳಿನಗರದಲ್ಲಿ ಎಲ್.ಇ.ಡಿ ಬೀದಿ ದೀಪಗಳ ಅಳವಡಿಕೆ ಕಾರ್ಯ ರೂಪಿಸಲಾಗಿದ್ದು, ಸದ್ಯ ನಗರಾದ್ಯಂತ ೬೪ ಸಾವಿರ ಬೀದಿ ದೀಪಗಳ ಅಳವಡಿಕೆ ಕಾರ್ಯ ರೂಪಿಸಲಾಗಿದೆ. ಇನ್ನೂ ಸ್ಮಾರ್ಟ್‌ಸಿಟಿ ಅಡಿಯಲ್ಲಿ ಯಾವುದೇ ಕಾಮಗಾರಿಗಳು ವಿಳಂಬವಾಗದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಬೈರತಿ ಬಸವರಾಜ ತಿಳಿಸಿದರು.