ಸಿಎಂ ಆದೇಶದ ಎಫೆಕ್ಟ್: ಕಾಮಗಾರಿ ಅನುಷ್ಠಾನಕ್ಕೆ ಅಡೆತಡೆ!

ಶಿವಮೊಗ್ಗ, ಜೂ. ೨: ಮಳೆಗಾಲ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಮಳೆ ಹಾನಿ ತಡೆಗೆ ಅಗತ್ಯ ಕ್ರಮಕೈಗೊಳ್ಳುವಂತೆ, ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಆದರೆ ಇದೀಗ ಅವರೇ ಹೊರಡಿಸಿರುವ ಆದೇಶದಿಂದ, ಮಳೆ ಹಾನಿ ಸಂಬಂಧಿತ ಕಾಮಗಾರಿಗಳ ಅನುಷ್ಠಾನಕ್ಕೆ ಅಡೆತಡೆಯಾಗಿ ಪರಿಣಮಿಸಿದೆ!
ಹೌದು. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೈಗೊಂಡಿದ್ದ ಎಲ್ಲ ಇಲಾಖೆ ಹಾಗೂ ನಿಗಮ-ಮಂಡಳಿ, ಪ್ರಾಧಿಕಾರಗಳ ಕಾಮಗಾರಿಗಳಿಗೆ ಸಂಬಂಧಿಸಿದ ಹಣ ಬಿಡುಗಡೆ / ಪಾವತಿ ತಡೆಹಿಡಿಯುವಂತೆ ಮತ್ತು ಪ್ರಾರಂಭವಾಗದಿರುವ ಎಲ್ಲ ಕಾಮಗಾರಿಗಳನ್ನು ತಡೆ ಹಿಡಿಯುವಂತೆ ಮುಖ್ಯಮಂತ್ರಿಗಳು ಆದೇಶ ಹೊರಡಿಸಿದ್ದರು.
ಇದರ ನೇರ ಪರಿಣಾಮ, ಪ್ರತಿ ಮಳೆಗಾಲದ ವೇಳೆ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಸ್ಥಿತಿ ಸೃಷ್ಟಿಸುವ ಶಿವಮೊಗ್ಗ ತಾಲೂಕು ಬಸವನಗಂಗೂರು ಕೆರೆ ನಾಲೆ ಅಭಿವೃದ್ದಿ ಕಾಮಗಾರಿ ಮೇಲೆ ಬೀರುವಂತಾಗಿದೆ!
ಬಸವನಗಂಗೂರು ಕೆರೆಯ ಕೋಡಿ ನೀರು ಹರಿದು ಹೋಗುವ ಕಾಲುವೆ ಭಾರೀ ಪ್ರಮಾಣದಲ್ಲಿ ಒತ್ತುವರಿಯಾಗಿದೆ. ಕೆರೆಯ ಎರಡೂ ಬದಿ ಕಾಲುವೆಯೇ ಕಣ್ಮರೆಯಾಗಿದೆ. ಇದರಿಂದ ಕೆರೆ ಭರ್ತಿಯಾದ ವೇಳೆ, ತಗ್ಗು ಪ್ರದೇಶದಲ್ಲಿರುವ ಜನವಸತಿ ಪ್ರದೇಶಗಳಿಗೆ ಕೋಡಿ ನೀರು ನುಗ್ಗುತ್ತಿದೆ. ಇದರಿಂದ ನಾಗರೀಕರು ತೀವ್ರ ತೊಂದರೆ ಎದುರಿಸುವಂತಾಗಿದೆ.
ಹಣ ಬಿಡುಗಡೆ:
ಸರಾಗವಾಗಿ ಕೆರೆ ನೀರು ಹರಿದು ಹೋಗುವಂತೆ ಮಾಡುವ ಮೂಲಕ, ನಾಗರೀಕರಿಗೆ ಆಗುತ್ತಿರುವ ಅನಾನುಕೂಲ ತಪ್ಪಿಸಲು ಕಳೆದ ವರ್ಷ ೫೦ ಲಕ್ಷ ರೂ. ಮಂಜೂರಾಗಿತ್ತು.
ಕಾಮಗಾರಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ ಕೂಡ ಪೂರ್ಣ ಗೊಂಡಿದೆ. ಬೇಸಿಗೆ ಅವಧಿಯಲ್ಲಿ ಕಾಮಗಾರಿ ನಡೆಸುವುದಾಗಿ ಸಣ್ಣ ನೀರಾವರಿ ಇಲಾಖೆ ತಿಳಿಸಿತ್ತಾದರೂ ಕೆಲಸ ಆರಂಭವಾಗಿರಲಿಲ್ಲ.
ಸಿಎಂ ಆದೇಶದ ಅಡ್ಡಿ:
ಈ ನಡುವೆ ಮುಖ್ಯಮಂತ್ರಿಗಳು ಹೊರಡಿಸಿರುವ ಆದೇಶ ಮುಂದಿಟ್ಟುಕೊಂಡು, ಸಣ್ಣ ನೀರಾವರಿ ಇಲಾಖೆ ಕಾಮಗಾರಿ ಆರಂಭಕ್ಕೆ ಮೀನಮೇಷ ಎಣಿಸುತ್ತಿದೆ. ಸಂಬಂಧಿಸಿದ ಇಲಾಖೆ ಸಚಿವರು, ಹಿರಿಯ ಅಧಿಕಾರಿಗಳ ಅನುಮತಿ ದೊರಕಿದ ನಂತರ ಕಾಮಗಾರಿ ಆರಂಭಿಸುವುದಾಗಿ ಹೇಳಲಾರಂಭಿಸಿದೆ.
ಇದರಿಂದ ಪ್ರಸ್ತುತ ಮಳೆಗಾಲದ ವೇಳೆ ಬಸವನಗಂಗೂರು ಕೆರೆ ಭರ್ತಿಯಾದರೇ, ಮತ್ತೆ ತಗ್ಗುಪ್ರದೇಶದಲ್ಲಿರುವ ಜನವಸತಿ ಪ್ರದೇಶಗಳು ಜಲಾವೃತವಾಗುತ್ತವೆ. ಇದರಿಂದ ನಾಗರೀಕರು ತೀವ್ರ ತೊಂದರೆ ಎದುರಿಸುವಂತಾಗುತ್ತದೆ.