‘ಸಿಎಂ ಆಗುವ ಆಸೆ ನನಗಿಲ್ಲ’

ಕಲಬುರಗಿ,ಡಿ.೪- ನಾನು ಮುಖ್ಯಮಂತ್ರಿಯಾಗುವ ಮಾತೇ ಇಲ್ಲ. ಈ ಬಗ್ಗೆ ಆಸೆಯನ್ನು ಇಟ್ಟುಕೊಂಡಿಲ್ಲ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಸಚಿವ ಕೆ.ಎಸ್. ಈಶ್ವರಪ್ಪರವರು ಮುರುಗೇಶ್ ನಿರಾಣಿ ಅವರು ಮುಂದೊಂದು ದಿನ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿಕೆ ನೀಡಿದ್ದ ಬೆನ್ನಲ್ಲೆ ನಿರಾಣಿ ಅವರು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ.
ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಬೊಮ್ಮಾಯಿ ಅವರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುವುದಾಗಿ ಹೇಳಿದರು.
೨೦೨೩ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬೊಮ್ಮಾಯಿ ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ. ೧೨೫ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ. ಆನಂತರ ಸಂಘ ಪರಿವಾರ, ಹೈಕಮಾಂಡ್, ಸಿಎಂ ಅಭ್ಯರ್ಥಿಯನ್ನು ನಿರ್ಧರಿಸುತ್ತಾರೆ ಎಂದರು.
ಸದ್ಯಕ್ಕೆ ತಾವಂತೂ ಸಿಎಂ ಆಗುವ ಅಸೆ ಇಟ್ಟುಕೊಂಡಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ, ಪಕ್ಷದ ಕೆಲಸ ಮಾಡಿಕೊಂಡು ಹೋಗುವಂತೆ ಪಕ್ಷ ಹೇಳಿದರೂ ಅದಕ್ಕೂ ಸಿದ್ಧವಾಗಿದ್ದೇನೆ ಎಂದರು.
ಪರಿಷತ್ ಚುನಾವಣೆಗೆ ಜೆಡಿಎಸ್ ಬೆಂಬಲ ನೀಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ದೊಡ್ಡವರ ಮಟ್ಟದಲ್ಲಿ ಬೆಂಬಲ ನೀಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ತಮ್ಮಲ್ಲಿ ಮಾಹಿತಿ ಇಲ್ಲ. ಎರಡೂ ಪಕ್ಷಗಳ ಮುಖಂಡರು ನಿರ್ಧಾರ ಕೈಗೊಳ್ಳುತ್ತಾರೆ ಎಂದು ನಿರಾಣಿ ಹೇಳಿದರು.
ಕೊರೊನಾ ೩ನೇ ಅಲೆ ಎದುರಿಸಲು ಸರ್ಕಾರ ಸನ್ನದ್ಧವಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.