ಸಿಎಂ ಅಭಿನಂದನಾ ಸಮಾರಂಭದಲ್ಲಿ ಶೋಷಿತರ ಕಡೆಗಣನೆ: ಆರೋಪ

ಸಂಜೆವಾಣಿ ವಾರ್ತೆ.
ಬೀದರ್:ಮಾ.7: ಮುಖ್ಯಮಂತ್ರಿ ಸಿದ್ಧರಾಮಯ್ಯನವರು ವಿಶ್ವಗುರು ಬಸವಣ್ಣನವರನ್ನು ರಾಜ್ಯದ ಸಾಂಸ್ಕøತಿಕ ನಾಯಕರೆಂದು ಘೋಷಣೆ ಮಾಡಿರುವುದು ಸ್ವಾಗತಾರ್ಹ ಕ್ರಮ. ಅವರಿಗೆ ಅಭಿನಂದಿಸುವುದು ನಮ್ಮೇಲ್ಲರ ಕರ್ತವ್ಯವೂ ಹೌದು. ಆದರೆ, ಕಾರ್ಯಕ್ರಮ ಸಂಘಟಕರು ಶೋಷಿತ ವರ್ಗದವರನ್ನು ಕಡೆಗಣಿಸಿ, ಕಾರ್ಯಕ್ರಮಕ್ಕೆ ಅವ್ಹಾನಿಸದೇ ತಾರತಮ್ಯ ಎಸಗಿರುವುದು ಖಂಡನಾರ್ಹ ಎಂದು ಭಾರತೀಯ ಭೀಮಸೇನೆ ರಾಷ್ಟ್ರೀಯ ಉಪಾಧ್ಯಕ್ಷ ಅಶೋಕ ಮಾಳಗೆ ಆರೋಪಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿ, ಅಭಿನಂದನಾ ಸಮಾರಂಭದಲ್ಲಿ ಬಸವಾದಿ ತತ್ವ ಸಿದ್ಧಾಂತದ ಮೇಲೆ ನಡೆಯುತ್ತಿರುವ ಸಂಘ ಸಂಸ್ಥೆಗಳು, ಬಸವಾದಿ ಶರಣರ ಸಂಘಟನೆಗಳ ಮುಖಂಡರು, ಹಿಂದುಳಿದ ಶೋಷಿತ ಸಮುದಾಯ, ಬಸವಾದಿ ಶರಣರನ್ನು ಕಡೆಗಣಿಸಿರುವುದು ತೀರಾ ನೋವಿನ ಸಂಗತಿಯಾಗಿದೆ ಎಂದು ಮಾಳಗೆ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಸರ್ವ ಜನಾಂಗದ ನಾಯಕ, ನುಡಿಯಂತೆ ನಡೆಯುವ ಸಿದ್ಧರಾಮಯ್ಯ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಆಯೋಜಕರು ಬಸವೇಶ್ವರರ ತತ್ವ ಸಿದ್ಧಾಂತ ಅನುಸರಿಸುವ ಶೋಷಿತ ಸಮುದಾಯಗಳ ಶರಣರನ್ನು ಸಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿಕೊಡಬೇಕೆಂದು ಮಾಳಗೆ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.