ಸಿಎಂ ಅಂಗಳಕ್ಕೆ ಜಾಲಹಳ್ಳಿ ತಾಲೂಕು ಹೋರಾಟ

ದೇವದುರ್ಗ.ನ.೧೦- ಬೂದಿಮುಚ್ಚಿದ ಕೆಂಡದಂತಿದ್ದ ಜಾಲಹಳ್ಳಿ ಹೊಸ ತಾಲೂಕು ಹೋರಾಟ, ನಿಧಾನವಾಗಿ ಮೈಕೊಡವಿ ಎದ್ದುನಿಂತಿದ್ದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಂಗಳ ತಲುಪಿದೆ. ಹೊಸ ತಾಲೂಕು ರಚಿಸುವಂತೆ ಕೋರಿ ಹೋರಾಟ ಸಮಿತಿ, ಸಚಿವರು ಹಾದಿಯಾಗಿ ವಿಪಕ್ಷ ನಾಯಕರಿಗೂ ಮನವಿ ಸಲ್ಲಿಸಿದೆ.
ಐತಿಹಾಸಿಕ ಹಿನ್ನೆಲೆ ಹೊಂದಿರುವ ತಾಲೂಕು ಈ ಹಿಂದೆ ಶಾಂತವಾಗಿಯೇ ಇತ್ತು. ಯಾವಾಗ ಸಚಿವ ಸಂಪುಟ ಸಭೆಯಲ್ಲಿ ಅರಕೇರಾ ಹೊಸ ತಾಲೂಕು ರಚನೆಗೆ ಅನುಮೋದನೆ ಸಿಕ್ಕಿತೋ, ಅಂದಿನಿಂದ ತಾಲೂಕು ರಚನೆ ಮರು ಜೀವ ಪಡೆದುಕೊಂಡಿದೆ. ಜಾಲಹಳ್ಳಿ ಹಾಗೂ ಗಬ್ಬೂರು ಹೊಸ ತಾಲೂಕು ರಚಿಸುವಂತೆ ಹೋರಾಟ ತೀವ್ರಗೊಂಡಿದೆ.
ಜಾಲಹಳ್ಳಿ ಹಾಗೂ ಗಬ್ಬೂರು ಪಪಂ ಅಥವಾ ಪುರಸಭೆಯಾಗಲು ಎಲ್ಲ ಅರ್ಹತೆ ಹೊಂದಿದೆ. ಆದರೆ, ತಾಲೂಕು ಹೋರಾಟದ ಧ್ವನಿ ಕುಗ್ಗಿಸಲು ಗ್ರಾಪಂಯಾಗಿಯೇ ಮುಂದುವರಿಸಿದ್ದಾರೆ ಎನ್ನುವ ಆರೋಪವಿದೆ. ವಿಭಿನ್ನ ಮಾದರಿ ಯಲ್ಲಿ ಹೋರಾಟ ಮುಂದುವರಿಸಿದ ಜಾಲಹಳ್ಳಿ ಹೊಸ ತಾಲೂಕು ಹೋರಾಟ ಸಮಿತಿ ತಮ್ಮ ಧ್ವನಿ ಸರ್ಕಾರಕ್ಕೆ ಮುಟ್ಟಿಸಲು ಮುಂದಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪ, ಕಂದಾಯ ಸಚಿವ ಆರ್.ಅಶೋಕ, ಸಿಎಂ ಆಪ್ತ ಸಹಾಯಕ ರಾಜಣ್ಣ, ವಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಮಾಜಿ ಸಿಎಂ ಕುಮಾರಸ್ವಾಮಿ ಸೇರಿ ೮ಕ್ಕೂ ಹೆಚ್ಚು ಸಚಿವರಿಗೆ ಮನವಿ ಸಲ್ಲಿಸಿದೆ. ಹೊಸ ತಾಲೂಕು ರಚನೆ ಅಗತ್ಯತೆ, ರೈತರಿಗೆ ಅನುಕೂಲ, ಅಭಿವೃದ್ಧಿಗೆ ವೇಗ ಸಿಗುವ ಬಗ್ಗೆ ರಾಜಕೀಯ ನಾಯಕರಿಗೆ ಮನವಿಕೆ ಮಾಡಿಕೊಟ್ಟಿದ್ದಾರೆ.

೧೯೬೦ರಲ್ಲಿ ಕೇಳಿಬಂದಿತ್ತು ಕೂಗು
೧೯೬೦ರಲ್ಲೇ ಜಾಲಹಳ್ಳಿ ತಾಲೂಕು ಮಾಡುವಂತೆ ಅಂದಿನ ಸರ್ಕಾರಕ್ಕೆ ಇಲ್ಲಿನ ಹೋರಾಟಗಾರರು ಮನವಿ ಸಲ್ಲಿಸಿದ್ದರು. ಅದನ್ನೇ ಆಧಾರವಾಗಿಟ್ಟುಕೊಂಡ ಸಮಿತಿ, ಕಾನೂನು ಹೋರಾಟ ಸೇರಿ ವಿಭಿನ್ನವಾದ ಹೋರಾಟ ಮಾಡಲು ಮುಂದಾಗಿದೆ. ಜಿಲ್ಲಾ ಹಾಗೂ ತಾಲೂಕು ಕೇಂದ್ರದಿಂದ ದೂರವಿದ್ದು, ಅಗತ್ಯ ಜನಸಂಖ್ಯೆ, ಮತದಾರರನ್ನು ಹೊಂದಿದೆ. ಹೋಬಳಿ ವ್ಯಾಪ್ತಿಗೆ ಸುಮಾರು ೭೦ಕ್ಕೂ ಹೆಚ್ಚು ಹಳ್ಳಿಗಳಿದ್ದು, ಐತಿಹಾಸಿಕ ದೇವಸ್ಥಾನ, ನೀರಾವರಿ ಸೌಲಭ್ಯ, ರಾಷ್ಟ್ರೀಯ ಹೆದ್ದಾರಿ ಹೊಂದಿದೆ. ಸೋಮನಮರಡಿ ಜಲವಿದ್ಯುತ್ ಕೇಂದ್ರ, ಉತ್ತಮ ವಾಣಿಜ್ಯ ಕೇಂದ್ರವಾಗಿದ್ದು, ಹೆಚ್ಚು ಕಂದಾಯ ಪ್ರದೇಶ ಹೊಂದಿದೆ.

ಕೋಟ್=======
ಜಾಲಹಳ್ಳಿ ಹೊಸ ತಾಲೂಕು ಆಗಲು ಎಲ್ಲ ಅರ್ಹತೆ ಹೊಂದಿದೆ. ಆದರೆ, ರಾಜಕೀಯ ನಾಯಕರು ಹಾಗೂ ಸರ್ಕಾರದ ಇಚ್ಚಾಶಕ್ತಿ ಕೊರತೆಯಿಂದ ವಂಚನೆಗೆ ಒಳಗಾಗಿದೆ. ೧೯೬೦ರಲ್ಲೇ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಶ್ರೀ ಜಯಶಾಂತಲಿಂಗೇಶ್ವರ ಸ್ವಾಮೀಜಿ ಮ್ಯಾಪ್ ತಯಾರಿಸಿ ಸರ್ಕಾರಕ್ಕೆ ವರದಿ ನೀಡಿದ್ದಾರೆ. ಅದರ ಆಧಾರದಲ್ಲಿ ಹೊಸ ತಾಲೂಕು ರಚನೆ ಮಾಡಬೇಕು.
ಆದನಗೌಡ ಬುಂಕಲದೊಡ್ಡಿ
ಜಾಲಹಳ್ಳಿ ತಾಲೂಕು ಹೋರಾಟ ಸಮಿತಿ ಕಾರ್ಯಾಧ್ಯಕ್ಷ

೧೦-ಡಿವಿಡಿ-೩