ಸಿಎಂಸಿ ಚುನಾವಣೆ-ಪಕ್ಷಗಳ ಕೆಸರು ಎರೆಚಾಟ

ಮುಳಬಾಗಿಲು, ನ.೪: ಮಳೆನಿಂತರೂ ಹನಿ ನಿಂತಿಲ್ಲ ಎಂಬಂತೆ ಮುಳಬಾಗಿಲು ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಚುನಾವಣೆಯ ನಂತರ ರಾಜಕೀಯ ಕೆಸರು ಎರಚಾಟ ಹೆಚ್ಚಾಗುತ್ತಿದ್ದು ನಗರಸಭೆ ಚುನಾವಣೆ ನಮ್ಮಿಂದಲೇ ಎಂಬ ಕ್ರೆಡಿಟ್‌ಗೆ ಪೈಪೋಟಿ ಆರಂಭವಾಗಿದೆ. ಸಚಿವ ಹೆಚ್.ನಾಗೇಶ್, ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಬಳಗದ ದಲಿತ ಮುಖಂಡರು, ಜೆ.ಡಿ.ಎಸ್‌ನ ಜಿ.ನಾಗರಾಜ್ ಕರೆದಿದ್ದ ಎಲ್ಲಾ ಪತ್ರಿಕಾಗೋಷ್ಠಿಗಳು ನಾಟಕೀಯ ಬೆಳವಣಿಗೆಗಳಲ್ಲಿ ರದ್ದಾಗಿರುವುದು ಸೋಮವಾರದ ವಿಶೇಷವಾಗಿದೆ.
ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಆದ ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವರಾದ ಹೆಚ್.ನಾಗೇಶ್ ಕೋಲಾರದಲ್ಲಿ ಭಾನುವಾರ ಮಾದ್ಯಮದವರೊಂದಿಗೆ ಮಾತನಾಡಿ ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್, ಸಂಸದ ಎಸ್.ಮುನಿಸ್ವಾಮಿ, ಜೆ.ಡಿ.ಎಸ್ ಮುಖಂಡ ಸಮೃದ್ಧಿ ವಿ.ಮಂಜುನಾಥ್ ರವರ ಮೇಲೆ ಕಿಡಿ ಕಾರಿ ನಿರ್ಮಾಪಕ ನಿರ್ದೇಶಕ ಕಂ ನಟ ಮತ್ತೊಬ್ಬರ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ಹೇಳಿದ ಹೇಳಿಕೆಗೆ ಪ್ರತಿ ಪತ್ರಿಕಾಗೋಷ್ಠಿಗೆ ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್ ಅಭಿಮಾನಿ ಬಳಗದ ದಲಿತ ಮುಖಂಡರಾದ ಮೆಕಾನಿಕ್ ಜಿ.ಶ್ರೀನಿವಾಸ್, ಕಾರ್ ವಿ.ಶ್ರೀನಿವಾಸ್, ಜಮ್ಮನಹಳ್ಳಿ, ಕೃಷ್ಣ, ಬೈರಕೂರು ರಾಮಾಂಜಿ ಮತ್ತಿತರರು ಸಚಿವರ ಹೇಳಿಕೆಗೆ ಪತ್ರಿಕಾ ಹೇಳಿಕೆ ಸಿದ್ದಪಡಿಸಿಕೊಂಡು ಪತ್ರಿಕಾಗೋಷ್ಠಿಗೆ ಆಗಮಿಸುವ ವೇಳೆಗೆ ಕರಡು ತಿದ್ದುಪಡಿಗೆ ಸಹಕಾರಿ ಕ್ಷೇತ್ರದ ಮುಖಂಡರೊಬ್ಬರು ತಡೆಯೊಡ್ಡಿ ಮುಂದೂಡಿದ್ದಾರೆ.
ಸಚಿವರ ಪತ್ರಿಕಾಗೋಷ್ಠಿಯೂ ರದ್ದು: ಸಚಿವ ಹೆಚ್.ನಾಗೇಶ್ ರವರ ಪತ್ರಿಕಾಗೋಷ್ಠಿ ಸಂಜೆ ೫ ಗಂಟೆಗೆ ಶಾಸಕರ ಕಚೇರಿಯಲ್ಲಿ ಏರ್ಪಡಿಸಿ ಮಾದ್ಯಮದವರಿಗೆ ಮಾಹಿತಿಯನ್ನು ರವಾನಿಸಲಾಯಿತು. ಆದರೆ ಕೊನೆಯ ಕ್ಷಣದಲ್ಲಿ ರದ್ದುಪಡಿಸಿ ಸಚಿವರು ಸಾರ್ವಜನಿಕರ ಕುಂದುಕೊರತೆ ಸಭೆಗೆ ಸೀಮಿತಗೊಳಿಸಲಾಗಿದೆ ಎಂದು ಸಂದೇಶ ಕಳುಹಿಸಲಾಯಿತು.
ಜೆ.ಡಿ.ಎಸ್ ಮುಖಂಡರ ಪತ್ರಿಕಾಗೋಷ್ಠಿ ರದ್ದು: ಜೆ.ಡಿ.ಎಸ್ ಮುಖಂಡ ಸಮೃದ್ಧಿ ವಿ.ಮಂಜುನಾಥ್ ಸಚಿವರ ವಿರುದ್ಧ ಕಿಡಿಕಾರಿ ನಗರಸಭೆಯಲ್ಲಿ ಅವರ ಮತ ಬೇಕಾಗಿಲ್ಲ ಎಂದು ಹೇಳಿರುವುದು ಸರಿಯಲ್ಲ ಜೆ.ಡಿ.ಎಸ್‌ಗೆ ಅವರೊಬ್ಬರೇ ನಾಯಕರಲ್ಲ ಎಂದು ಜೆ.ಡಿ.ಎಸ್ ನಗರಸಭೆ ಸದಸ್ಯ ಜಿ.ನಾಗರಾಜ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದಲ್ಲದೆ ಸೋಮವಾರ ಜೆ.ಡಿ.ಎಸ್ ಮುಖಂಡರಿಂದ ಪತ್ರಿಕಾಗೋಷ್ಠಿ ಆಯೋಜಿಸಲಾಗಿದೆ ಎಂದು ತಿಳಿಸಿ ಅವರೂ ಸಹಾ ಪತ್ರಿಕಾಗೋಷ್ಠಿ ಏರ್ಪಡಿಸದೆ ಮೌನಕ್ಕೆ ಜಾರಿದ್ದಾರೆ.
ಸಚಿವ ಹೆಚ್.ನಾಗೇಶ್ ಶಾಸಕರ ಕಚೇರಿಯಲ್ಲಿ ಸಾರ್ವಜನಿಕ ಕುಂದುಕೊರತೆಯ ಸಭೆಯ ನಂತರ ಮಾದ್ಯಮದವರೊಂದಿಗೆ ಮಾತನಾಡಿ ಕೋಲಾರದಲ್ಲಿ ಬಿಡುಗಡೆ ಮಾಡಿರುವ ’ಎ’ ಸಿನಿಮಾ ಟ್ರೈಲರ್ ಭರ್ಜರಿಯಾಗಿ ಓಡುತ್ತಿದೆ ಇನ್ನೂ ಎರಡು ದಿನ ಅದೇ ಸಿನಿಮಾ ಓಡಲಿ, ಬುಧವಾರದ ನಂತರ ಬಿ ಸಿನಿಮಾ ನೋಡಿಕೊಂಡು ಬಿಡುಗಡೆ ಮಾಡುತ್ತೇನೆ, ನನ್ನ ಸಿನಿಮಾಗೆ ನಾನೆ ನಿರ್ದೇಶಕ, ನಿರ್ಮಾಪಕ, ಹೀರೋ ಎಂಬ ಅರ್ಥದಲ್ಲಿ ಮಾರ್ಮಿಕವಾಗಿ ನುಡಿದರು.
ಬುಧವಾರ ನಗರಸಭೆ ಅಧ್ಯಕ್ಷ – ಉಪಾಧ್ಯಕ್ಷರು ಪದಗ್ರಹಣ ಸಮಾರಂಭ ಹಮ್ಮಿಕೊಂಡಿದ್ದು ಆ ಸಭೆಯಲ್ಲೇ ಜೆ.ಡಿ.ಎಸ್ ಮುಖಂಡರ ಎರಡು ಬಣಗಳು ಪಾಲ್ಗೊಂಡು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವ ಸಾಧ್ಯತೆಗಳು ನಿಶ್ಚಲವಾಗಿದೆ. ಇದೇ ಸಂದರ್ಭದಲ್ಲಿ ಸಚಿವ ನಾಗೇಶ್ ರವರು ಪಾಲ್ಗೊಂಡು ಜೆ.ಡಿ.ಎಸ್ ಮುಖಂಡ ಸಮೃದ್ಧಿ ವಿ.ಮಂಜುನಾಥ್ ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್ ಬಣಕ್ಕೆ ಟಾಂಗ್ ನೀಡುವ ಸಾಧ್ಯತೆಗಳು ಅಧಿಕವಾಗಿದೆ.