ಸಿಎಂಸಿಯಲ್ಲಿ ಮುಂಚೂಣಿ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ

ಬೀದರ:ಮೇ.27: ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ನಿರ್ದೇಶನದಂತೆ 18 ರಿಂದ 44 ವರ್ಷದ ಮುಂಚೂಣಿ ಕಾರ್ಯಕರ್ತರಿಗೆ ಬುಧವಾರ ಕೋವಿಡ್ ಲಸಿಕೆ ವಿತರಿಸುವ ಕಾರ್ಯ ನಡೆದಿದೆ.

ಬೀದರ್ ನಗರದಲ್ಲಿ ಪೌರಾಯುಕ್ತ ರವೀಂದ್ರನಾಥ ಅಂಗಡಿ ನೇತೃತ್ವದಲ್ಲಿ ನಗರಸಭೆ ವ್ಯಾಪ್ತಿಯ 243 ಬೀದಿ ಬದಿಯ ವ್ಯಾಪಾರಸ್ಥರಿಗೆ ಕೋವಿಡ್ ಲಸಿಕೆ ಕೊಡಲಾಯಿತು. ಎಪಿಎಂಸಿಯಲ್ಲಿ ಅಧಿಕಾರಿ ತುಳಸಿರಾಮ ಲಾಖೆ ಉಪಸ್ಥಿತಿಯಲ್ಲಿ ಹಮಾಲರಿಗೆ ಲಸಿಕೆ ನೀಡಲಾಯಿತು.

ಸಂದೀಪ ಪಾಟೀಲ ಅವರು ನಗರದ ಪೆಟ್ರೋಲ್ ಬಂಕ್‌ ನೌಕರರು ಹಾಗೂ ಸಿಲಿಂಡರ್ ಸರಬರಾಜುದಾರರಿಗೆ ಲಸಿಕೆ ಕೊಡಿಸಿದರು. ನೌಬಾದ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಟೊ ರಿಕ್ಷಾ ಚಾಲಕರಿಗೆ ಮತ್ತು ಕ್ಯಾಬ್ ಡ್ರೈವರಗಳಿಗೂ ಕೂಡ ಲಸಿಕಾಕರಣ ನಡೆಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ತಿಪ್ಪಣ್ಣ ಸಿರಸಗಿ ಅವರ ಸಮ್ಮುಖದಲ್ಲಿ ನಗರದ ಸ್ವಾಧಾರ ಗೃಹಗಳಲ್ಲಿನ ಫಲಾನುಭವಿಗಳಿಗೆ ಲಸಿಕೆ ಹಾಕಲಾಯಿತು.ವೈದ್ಯಾಧಿಕಾರಿ ಡಾ.ಸೋಹೆಲ್ ಎಂ.ಡಿ ಸಮ್ಮುಖದಲ್ಲಿ ಬೀದರ್ ನಗರದ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಇಲಾಖೆಯಲ್ಲಿರುವ ಅಧಿಕಾರಿ ಮತ್ತು ಸಿಬ್ಬಂದಿಗೆ, ಬಸ್ ನಿಲ್ದಾಣದಲ್ಲಿ ಫಾರ್ಮಾ ಡೆಲೇವರಿ ಬಾಯ್ಸ್ ಮತ್ತು ಸೇಲ್ಸ್‌ಮ್ಯಾನ್‌ಗಳಿಗೆ ಲಸಿಕಾಕರಣ ನಡೆಯಿತು.
ಬೀದರ್ ಉಪ ವಿಭಾಗಾಧಿಕಾರಿ ಗರಿಮಾ ಪನ್ವಾರ್ ನಗರದ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಅಲ್ಲಿನ ಸಾರಿಗೆ ನೌಕರರಿಗೆ ನಡೆಯುತ್ತಿದ್ದ ಲಸಿಕಾಕರಣ ವೀಕ್ಷಿಸಿದರು.

ಬೀದರ್ ಎಪಿಎಂಸಿ ಆವರಣದಲ್ಲಿ 12 ಜನ ಕಾರ್ಮಿಕರಿಗೆ ತಹಶೀಲ್ದಾರ್ ಗಂಗಾದೇವಿ ಸಿ.ಎಚ್. ಹಾಗೂ ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬದ ಸಮ್ಮುಖದಲ್ಲಿ ಲಸಿಕಾರಣ ನಡೆಯಿತು.

ಹುಮನಾಬಾದ್ ತಾಲ್ಲೂಕಿನಲ್ಲಿ ತಹಶೀಲ್ದಾರ್ ನಾಗಯ್ಯ ಹಿರೇಮಠ ಸಮ್ಮುಖದಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಕೋವಿಡ್ ಲಸಿಕೆ ಕೊಡಲಾಯಿತು. ಬಸವಕಲ್ಯಾಣದಲ್ಲಿ ಆಟೊ ಚಾಲಕರಿಗೆ ಹಾಗೂ ಚಿಟಗುಪ್ಪ ತಾಲ್ಲೂಕಿನಲ್ಲಿ
ಬೀದಿ ಬದಿ ವ್ಯಾಪಾರಸ್ಥರಿಗೆ ಕೋವಿಡ್‌ ಲಸಿಕೆ ಕೊಡಲಾಯಿತು.

ಲಸಿಕಾಕರಣ ಜನಜಾಗೃತಿ: ಭಾಲ್ಕಿ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರ ಆದೇಶದಂತೆ ನಿಟ್ಟೂರ ಬಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಜನಾಳ ಕೊಟಗ್ಯಾಳದ 20 ಅಂಗವಿಕಲರಿಗೆ ತಿಳಿವಳಿಕೆ ನೀಡಲಾಯಿತು.