ಸಿಎಂರಿಂದಲೇ ದೇವೇಗೌಡರಿಗೆ ಆಹ್ವಾನ: ಅಶ್ವತ್ಥ್ ಸ್ಪಷ್ಟನೆ

ಬೆಂಗಳೂರು, ನ.12- ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಲೋಕಾರ್ಪಣೆ ಸಮಾರಂಭಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಸ್ವತಃ ಮುಖ್ಯಮಂತ್ರಿಗಳೇ ಕರೆ ಮಾಡಿ ಮತ್ತು ಪತ್ರ ಬರೆದು ಆಹ್ವಾನಿಸಿದ್ದರು ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಸ್ಪಷ್ಟಪಡಿಸಿದ್ದಾರೆ.
ಈ ವಿಚಾರದಲ್ಲಿ ತಪ್ಪು ಹುಡುಕುವಂತದ್ದು ಏನೂ ಇಲ್ಲ ಎಂದು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರೂ ಆಗಿರುವ ಅವರು ಸುದ್ದಿಗಾರರಿಗೆ ಇಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದಿರುವುದು ಕೆಂಪೇಗೌಡರಿಗೆ ಸಂಬಂಧಿಸಿದ ಕಾರ್ಯಕ್ರಮ. ನಮಗೆ ಕೆಂಪೇಗೌಡರು ಮುಖ್ಯವಾಗಬೇಕಷ್ಟೆ. ಇಷ್ಟಕ್ಕೂ ಈ ಕಾರ್ಯಕ್ರಮಕ್ಕೆ ಆಹ್ವಾನ ಪತ್ರಿಕೆಯನ್ನು ಮುದ್ರಿಸಿರಲಿಲ್ಲ. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ದೇವೇಗೌಡರು ಸೇರಿದಂತೆ ಮಾಜಿ ಮುಖ್ಯಮಂತ್ರಿಗಳಿಗೆ ಆಮಂತ್ರಣ ನೀಡಿದ್ದಾರೆ ಎಂದು ಹೇಳಿದರು.
ಪ್ರತಿಮೆಯ ಶಂಕುಸ್ಥಾಪನೆ ಮತ್ತು ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನಕ್ಕೆ ಸ್ವತಃ ತಾವೇ ದೇವೇಗೌಡರಿಗೆ ಆಹ್ವಾನ ನೀಡಿದ್ದೇನೆ ಎಂದು ಪ್ರಶ್ನಯೊಂದಕ್ಕೆ ಉತ್ತರಿಸಿದರು.