ಸಿಇಟಿ ಸುಸೂತ್ರ ಆಗಸ್ಟ್‌ನಲ್ಲಿ ಫಲಿತಾಂಶ

ಬೆಂಗಳೂರು, ಜು. ೩೦- ಮಾರಕ ಕೊರೊನಾ ಸೋಂಕಿನ ಭೀತಿಯ ನಡುವೆ ಸಿಇಟಿ ಸಾಮಾನ್ಯ ಪ್ರವೇಶ ಪರೀಕ್ಷೆ ಸುಸೂತ್ರವಾಗಿ ನಡೆಯುತ್ತಿದ್ದು, ಪೋಷಕರಾಗಲಿ ವಿದ್ಯಾರ್ಥಿಗಳಾಗಲಿ ಆತಂಕಪಡುವ ಅಗತ್ಯವಿಲ್ಲ. ಆ. 15ರ ವೇಳೆಗೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಹೊರ ಬೀಳಲಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಇಂದು ಹಾಗೂ ನಾಳೆ ರಾಜ್ಯದಾದ್ಯಂತ ಆಯುರ್ವೇದ, ಯುನಾನಿ, ಇಂಜಿನಿಯರಿಂಗ್, ಕೃಷಿ, ತೋಟಗಾರಿಕೆ ವಿಜ್ಞಾನ ಸೇರಿದಂತೆ ಇನ್ನಿತರ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಸಿಇಟಿ ಪರೀಕ್ಷೆ ನಡೆಯಲಿದೆ. ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಇಂದು ಬೆಂಗಳೂರಿನ ಮಲ್ಲೇಶ್ವರಂ ಹಾಗೂ ಎಂಇಎಸ್ ಕಾಲೇಜಿನಲ್ಲಿ ನಡೆಯುತ್ತಿರುವ ಸಿಇಟಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಕೋವಿಡ್‌-19 ಕುರಿತಂತೆ ಕೇಂದ್ರಗಳಲ್ಲಿ ಕೈಗೊಂಡಿರುವ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸಿ ಹಲವು ಸೂಚನೆಗಳನ್ನು ಪರೀಕ್ಷಾ ಕೇಂದ್ರದ ಅಧಿಕಾರಿಗಳಿಗೆ ನೀಡಿದ್ದಾರೆ.
ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್ ನೀಡುವುದು,ಥರ್ಮಾಮೀಟರ್ ಮೂಲಕ ದೇಹದ ಉಷ್ಣಾಂಶ ಪರೀಕ್ಷೆ ನಡೆಸುತ್ತಿರುವುದನ್ನು ಪರಿಶೀಲಿಸಿದ ಸಚಿವರು ವಿದ್ಯಾರ್ಥಿಗಳಿಗೆ ಕೈಗೊಂಡಿರುವ ಸಾರಿಗೆ ವ್ಯವಸ್ಥೆ, ಪರೀಕ್ಷಾ ಕೇಂದ್ರದ ಸುತ್ತ ಪೊಲೀಸ್ ಭದ್ರತೆ ಹಾಗೂ ಇನ್ನಿತರ ಕ್ರಮಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು.
ಈ ವೇಳೆ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿಗಳು ಪರೀಕ್ಷಾ ಕೇಂದ್ರಗಳಿಗೆ ಆಗಮಿಸಲು ಸಾರಿಗೆ ವ್ಯವಸ್ಥೆ ಮತ್ತು ಕೇಂದ್ರಗಳಲ್ಲಿ ಅಧಿಕಾರಿಗಳಿಂದ ಸೂಕ್ತ ಮಾರ್ಗದರ್ಶನ ದೊರೆತ ಕುರಿತು ಮಾಹಿತಿ ಪಡೆದುಕೊಂಡ ನಂತರ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ವಿದ್ಯಾರ್ಥಿಗಳಾಗಲಿ-ಪೋಷಕರಾಗಲಿ ಆತಂಕಪಡುವ ಅಗತ್ಯವಿಲ್ಲ.
ಸಿಇಟಿ ಪರೀಕ್ಷೆ ಆಯೋಜನೆ ಕುರಿತಂತೆ ರಾಜ್ಯ ಹೈಕೋರ್ಟ್ ನೀ‌ಡಿರುವ ಸೂಚನೆಗಳನ್ನು ಪರೀಕ್ಷಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಜಾರಿ ಮಾಡಲಾಗಿದೆ.
ಸಾಮಾಜಿಕ ಅಂತರ, ಸ್ಯಾನಿಟೈಸರ್, ಮಾಸ್ಕ್ ಕುರಿತಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪ್ರತಿ ಕೊಠಡಿಯಲ್ಲಿ 24 ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ವ್ಯವಸ್ಥೆ ಕಲ್ಪಿಸಲಾಗಿದೆ. ಹೆಚ್ಚು ಕೊಠಡಿಗಳನ್ನು ಆಯೋಜಿಸುವ ಮೂಲಕ ಸಾಮಾಜಿಕ ಆಂತರ ಕಾಯ್ದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಪರೀಕ್ಷಾ ವ್ಯವಸ್ಥೆಯಲ್ಲಿ ಯಾವುದೇ ಲೋಪಗಳಾಗದಂತೆ ಕ್ರಮಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳು ನಿರಾತಂಕವಾಗಿ ಪರೀಕ್ಷೆ ಬರೆಯುತ್ತಿದ್ದಾರೆಂದು ಪರೀಕ್ಷಾ ಕೇಂದ್ರಗಳನ್ನು ಪರಿಶೀಲಿಸಿದ ನಂತರ ಡಿಸಿಎಂ ಮಾಹಿತಿ ನೀಡಿದರು.
ರಾಜ್ಯದಾದ್ಯಂತ 1,94,356 ವಿದ್ಯಾರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ನಗರದಲ್ಲಿ 40,200 ವಿದ್ಯಾರ್ಥಿಗಳು 83 ಕೇಂದ್ರಗಳಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ರಾಜ್ಯದಾದ್ಯಂತ ಒಟ್ಟು 497 ಸಿಇಟಿ ಪರೀಕ್ಷಾ ಕೇಂದ್ರಗಳನ್ನು ವ್ಯವಸ್ಥೆ ಮಾಡಲಾಗಿದೆ.
ಕೊರೊನಾ ಸೋಂಕು ದೃಢಪಟ್ಟಿರುವ 40 ವಿದ್ಯಾರ್ಥಿಗಳಲ್ಲಿ ಬೆಂಗಳೂರಿನಲ್ಲಿ 12, ಜ್ಞಾನಭಾರತಿ ಕೇಂದ್ರದಲ್ಲಿ 7, ಜಿಕೆವಿಕೆ ಕೇಂದ್ರದಲ್ಲಿ 5 ಪರೀಕ್ಷೆಗೆ ಹಾಜರಾಗಿದ್ದಾರೆ. ಅವರನ್ನು ಪರೀಕ್ಷಾ ಕೇಂದ್ರಗಳಿಗೆ ಆಂಬುಲೆನ್ಸ್‌ಗಳ ಮೂಲಕ ಕರೆದುಕೊಂಡು ಬರಲಾಗಿದೆ. ಮತ್ತೆ ಅವರನ್ನು ವಾಪಸ್ ಕಳುಹಿಸಲಾಗುವುದು,ಇದುವರೆಗೂ ಯಾವುದೇ ಕೇಂದ್ರಗಳಲ್ಲಿ ದೋಷಗಳಾಗಿಲ್ಲ ಎಂದು ಖಚಿತಪಡಿಸಿದರು.
ಕೊರೊನಾ ವೈರಸ್ ಸೋಂಕು ಭೀತಿ ಇರುವ ಹಿನ್ನೆಲೆ, ಪರೀಕ್ಷಾ ಫಲಿತಾಂಶಗೊಂಡ ನಂತರ ಸೀಟು ಹಂಚಿಕೆಗಾಗಿ ಆನ್‌ಲೈನ್ ಮೂಲಕ ಕೌನ್ಸೆಲಿಂಗ್ ನಡೆಸಲಾಗುವುದು, ವಿದ್ಯಾರ್ಥಿ ಮತ್ತು ಪೋಷಕರು ಪರೀಕ್ಷಾ ಪ್ರಾಧಿಕಾರ ಘಟಕಕ್ಕೆ ಆಗಮಿಸುವ ಅಗತ್ಯವಿಲ್ಲ. ವಿದ್ಯಾರ್ಥಿಗಳು ತಮಗಿಷ್ಟವಾದ ಕೋರ್ಸ್ ಹಾಗೂ ಕಾಲೇಜುಗಳನ್ನು ನೇರವಾಗಿ ಆನ್‌ಲೈನ್ ಮೂಲಕವೇ ಪ್ರವೇಶ ಪಡೆದು ನಂತರ ಕಾಲೇಜಿಗೆ ಹೋಗಿ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಲು ಅವಕಾಶ ಕಲ್ಪಿಸುವುದಾಗಿ ಅವರು ತಿಳಿಸಿದರು.

  • ಇಂದು-ನಾಳೆ ರಾಜ್ಯದಾದ್ಯಂತ ಸಿಇಟಿ ಪರೀಕ್ಷೆ.
  • 1,94,356 ವಿದ್ಯಾರ್ಥಿಗಳಿಂದ ಸಿಇಟಿಗೆ ನೋಂದಣಿ.
  • ಬೆಂಗಳೂರಿನ 83 ಸಿಇಟಿ ಕೇಂದ್ರದಲ್ಲಿ 40,200 ವಿದ್ಯಾರ್ಥಿಗಳು.
  • ಕೊರೊನಾ ಸೋಂಕಿತ 40 ವಿದ್ಯಾರ್ಥಿಗಳು.
  • ಬೆಂಗಳೂರಿನಲ್ಲಿ 12, ಜಿಕೆವಿಕೆ 5, ಜ್ಞಾನಭಾರತಿ 7 ವಿದ್ಯಾರ್ಥಿಗಳು.
  • ಸೋಂಕಿತರಿಗೆ ಆಂಬುಲೆನ್ಸ್ ವ್ಯವಸ್ಥೆ.
  • ಆ. 15ರ ವೇಳೆಗೆ ಸಿಇಟಿ ಫಲಿತಾಂಶ.
  • ಸಚಿವರಿಂದ ಪರೀಕ್ಷಾ ಕೇಂದ್ರಗಳ ವ್ಯವಸ್ಥೆ ಪರಿಶೀಲನೆ.
  • ಈ ಬಾರಿ ಆನ್‌ಲೈನ್ ಮೂಲಕವೇ ಪ್ರವೇಶ ಪ್ರಕ್ರಿಯೆ.