ಸಿಇಟಿ: ವಿದ್ಯಾನಿಧಿಯ ವರುಣ್‌ಗೌಡ ರಾಜ್ಯಕ್ಕೆ 83ನೇ ರ್‍ಯಾಂಕ್

ತುಮಕೂರು, ಜೂ. ೧೭- ೨೦೨೩ರ ಸಿಇಟಿ ಫಲಿತಾಂಶವು ಪ್ರಕಟಗೊಂಡಿದ್ದು, ವಿದ್ಯಾನಿಧಿ ಕಾಲೇಜಿನ ವರುಣ್‌ಗೌಡ ೮೩ನೇ ರ್‍ಯಾಂಕ್ ಗಳಿಸುವುದರೊಂದಿಗೆ ಕಾಲೇಜು ಮಹತ್ತರವಾದ ಮೈಲುಗಲ್ಲನ್ನು ಸ್ಥಾಪಿಸಿದೆ.
ಕಾಲೇಜಿನಲ್ಲಿ ಒದಗಿಸಲಾಗುತ್ತಿರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡಲ್ಲಿ ಖಂಡಿತವಾಗಿಯೂ ಯಶಸ್ಸಿನ ಮೆಟ್ಟಿಲುಗಳನ್ನು ಏರಬಹುದು ಎಂಬುದನ್ನು ಉತ್ತಮ ರ್‍ಯಾಂಕಿಂಗ್ ಪಡೆದುಕೊಂಡ ವಿದ್ಯಾರ್ಥಿಗಳು ತೋರಿಸಿಕೊಟ್ಟಿದ್ದಾರೆ.
ಧ್ರುವ (೧೦೭೭), ಸುಜನ್‌ಜೈನ್ (೧೧೮೬), ಜಯಂತ್‌ಗೌಡ (೧೨೫೧), ಹಿತೇಶ್ ಪಟೇಲ್ (೨೮೧೨), ಯಶವಂತ್ (೩೦೫೫) ಸಂಜಯ್ ಜೆ. (೩೨೬೬), ಉಲ್ಲಾಸ್ ವೈ (೩೫೩೩), ಶ್ರೇಯಾ ಡಿ.ವಿ. (೪೧೩೧) ಲಿಖಿತ್‌ಎಚ್.ಎಸ್. (೪೩೩೦) ಸೇರಿದಂತೆ ೧೫ ವಿದ್ಯಾರ್ಥಿಗಳು ಇಂಜಿನಿಯರಿಂಗ್ ವಿಭಾಗದಲ್ಲಿ ಈ ಸಾಧನೆಗೈದಿದ್ದಾರೆ.
ಇನ್ನುಳಿದಂತೆ ಬಿ.ಎಸ್ಸಿ ಅಗ್ರಿಕಲ್ಚರ್ ಮತ್ತು ವೆಟರ್‍ನರಿ ವಿಭಾಗಗಳಲ್ಲೂ ವಿದ್ಯಾನಿಧಿ ವಿದ್ಯಾರ್ಥಿಗಳು ರ್‍ಯಾಂಕಿಂಗ್ ಪಡೆದುಕೊಂಡಿದ್ದಾರೆ.
ಪೋಷಕರು ನಮ್ಮ ಸಂಸ್ಥೆಯ ಮೇಲಿಟ್ಟ ವಿಶ್ವಾಸವನ್ನು ಉಳಿಸಿಕೊಂಡಿದ್ದೇವೆ ಎಂಬುದಕ್ಕಾಗಿ ಹೆಮ್ಮೆಯೆನಿಸುತ್ತಿದೆ. ನಾವು ನೀಡಿರುವ ಗುಣಾತ್ಮಕ ಶಿಕ್ಷಣದ ಭರವಸೆಯನ್ನು ಮಕ್ಕಳು ಸೂಕ್ತವಾಗಿ ಗ್ರಹಿಸಿಕೊಂಡು ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ. ನೂರರ ಒಳಗಿನ ರ್‍ಯಾಂಕ್ ಬಂದಿರುವುದು ನಮ್ಮನ್ನು ಮುಂದಿನ ಸಾಧನೆಯ ಪಥಕ್ಕೆ ಅಣಿಗೊಳಿಸುವುದಕ್ಕಿದೆ. ಮುಂಬರುವ ವರ್ಷಗಳಲ್ಲಿ ಇನ್ನಷ್ಟು ಮಕ್ಕಳು ಈ ನಿಟ್ಟಿನಲ್ಲಿ ಯಶಸ್ಸನ್ನು ಕಾಣುವಂತಾಗಲಿ. ವಿದ್ಯಾರ್ಥಿಗಳಿಗೆ ಕಲಿಕಾ ಸ್ನೇಹಿ ವಾತಾವರಣವನ್ನು ಒದಗಿಸಿಕೊಟ್ಟು, ಅಗತ್ಯ ಮಾರ್ಗದರ್ಶನ, ಉತ್ತೇಜನವನ್ನು ನೀಡಿದರೆ ತಮ್ಮ ಬದುಕಿನಲ್ಲಿ ಔನ್ನತ್ಯವನ್ನು ಸಾಧಿಸುತ್ತಾರೆ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎನ್.ಬಿ. ಪ್ರದೀಪ್‌ಕುಮಾರ್ ಹೇಳಿದ್ದಾರೆ.
ವಿದ್ಯಾರ್ಥಿ ವರುಣ್‌ಗೌಡ ಮಾತನಾಡಿ, ಕಾಲೇಜಿನಲ್ಲಿ ನೀಡಿದ ಪ್ರೋತ್ಸಾಹ ನನ್ನನ್ನು ಈ ಹಂತಕ್ಕೆ ಬೆಳೆಸಿದೆ. ವಿದ್ಯಾರ್ಥಿಗಳೊಂದಿಗೆ ಸ್ನೇಹದಿಂದ ವರ್ತಿಸುವ ಶಿಕ್ಷಕ ವೃಂದದವರು ಸದಾ ನಮಗೆ ನೀಡುತ್ತಿದ್ದ ಉತ್ತೇಜನ ನಮ್ಮನ್ನು ಸಾಧನೆಯ ಕಡೆಗೆ ಪ್ರೇರೇಪಿಸಿದೆ. ಮುಂದಿನ ವರ್ಷಗಳಲ್ಲಿ ನಮ್ಮ ಕಾಲೇಜಿಗೆ ಹೆಚ್ಚಿನ ಮಂದಿಗೆ ಇನ್ನಷ್ಟು ಒಳ್ಳೆಯ ರ್‍ಯಾಂಕಿಂಗ್ ಬರಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸಿದ್ದಲಿಂಗಸ್ವಾಮಿ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.