ಸಿಇಟಿ ಪರೀಕ್ಷೆ ಸುಸೂತ್ರ: ಬಿಗಿಭದ್ರತೆ

ಇಂದಿನಿಂದ ಸಿಇಟಿ ಪರೀಕ್ಷೆ ಆರಂಭವಾಗಿದ್ದು, ನಗರದ ಶೇಷಾದ್ರಿಪುರಂನ ಪರೀಕ್ಷಾ ಕೇಂದ್ರದ ಮುಂಭಾಗ ಪರೀಕ್ಷೆ ಬರೆಯಲು ನಿಂತಿರುವ ವಿದ್ಯಾರ್ಥಿಗಳು.

ಬೆಂಗಳೂರು, ಏ.೧೮-ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಇಂದಿನಿಂದ ಎರಡು ದಿನಗಳ ಕಾಲ ಸಾಮಾನ್ಯ ಪ್ರವೇಶ ಪರೀಕ್ಷೆ-೨೦೨೪(ಸಿಇಟಿ) ಆರಂಭಾಗಿದೆ. ರಾಜ್ಯಾದ್ಯಂತ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಪರೀಕ್ಷಾ ಪ್ರಾಧಿಕಾರ ಸಜ್ಜಾಗಿದೆ.
ರಾಜ್ಯದ ಒಟ್ಟು ೭೩೭ ಕೇಂದ್ರಗಳಲ್ಲಿ ನಡೆಯಲಿದ್ದು, ವಿದ್ಯಾರ್ಥಿಗಳು ಇಂದು ಬೆಳಿಗ್ಗೆ ೧೦ ಗಂಟೆ ಸುಮಾರಿಗೆ ಪರೀಕ್ಷೆ ಕೇಂದ್ರಗಳತ್ತ ತೆರಳಿದರು.
ಇಂದು ಜೀವಶಾಸ್ತ್ರ ಮತ್ತು ಗಣಿತ ಪರೀಕ್ಷೆ, ನಾಳೆ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪರೀಕ್ಷೆ ನಡೆಯಲಿವೆ. ಬೆಳಿಗ್ಗೆ ೧೦.೩೦ಕ್ಕೆ ಮತ್ತು ಮಧ್ಯಾಹ್ನ ೨.೩೦ಕ್ಕೆ ಪರೀಕ್ಷೆ ಆರಂಭವಾಗಲಿದೆ. ಅಭ್ಯರ್ಥಿಗಳು ಪರೀಕ್ಷೆ ನಡೆಯುವ ಅರ್ಧ ಗಂಟೆ ಮುಂಚಿತವಾಗಿಯೇ ಹಾಜರಿರಬೇಕು.
ಇಂಗ್ಲಿಷ್ ಮತ್ತು ಕನ್ನಡ ಎರಡರಲ್ಲೂ ಪ್ರಶ್ನೆಪತ್ರಿಕೆ ಇರಲಿದೆ. ಆದರೆ. ಪ್ರಶ್ನೆಗೆ ಗೊಂದಲ ಉಂಟಾದಲ್ಲಿ ಇಂಗ್ಲಿಷ್ ಆವೃತ್ತಿಯನ್ನೇ ಅಂತಿಮವೆಂದು ಪರಿಗಣಿಸಬೇಕು. ಈ ವಿಚಾರದಲ್ಲಿ ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಅವಕಾಶ ಇರುವುದಿಲ್ಲ ಎಂದು ಪ್ರಾಧಿಕಾರ ಹೇಳಿದೆ.
ಎಲೆಕ್ಟ್ರಾನಿಕ್ ವಸ್ತು, ವಾಚ್, ಮೊಬೈಲ್, ಕ್ಯಾಲ್ಯುಕಲೇಟರ್, ಮಹಿಳಾ ವಿದ್ಯಾರ್ಥಿಗಳು ಮಾಂಗಲ್ಯ ಹೊರತುಪಡಿಸಿ ಯಾವುದೇ ಆಭರಣ ಧರಿಸುವಂತಿಲ್ಲ. ಪೂರ್ಣ ತೋಳಿನ ಅಂಗಿ, ಜೀನ್ಸ್, ಶೂ ಧರಿಸುವಂತಿಲ್ಲ ಎಂದು ನಿರ್ದೇಶನ ನೀಡಲಾಗಿದೆ.
ವಿದ್ಯಾರ್ಥಿಗಳಿಗೆ ಅವರ ಸಮೀಪದ ಕೇಂದ್ರಗಳಲ್ಲೇ ಪರೀಕ್ಷೆ ಬರೆಯಲು ವ್ಯವಸ್ಥೆ ಕಲ್ಪಿಸಲಾಗಿದೆ. ಬೇಸಿಗೆಯ ಕಾರಣ ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಲಾಗಿದೆ. ಒಂದು ಪರೀಕ್ಷಾ ಕೊಠಡಿಯಲ್ಲಿ ೧೬ ಆವೃತ್ತಿಗಳ ಪ್ರಶ್ನೆ ಪತ್ರಿಕೆಗಳನ್ನು ಕೊಡಲಾಗುತ್ತದೆ. ನಕಲು ಮಾಡಲು ಅವಕಾಶ ಆಗದಂತೆ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕಣ್ಗಾವಲು ವ್ಯವಸ್ಥೆ ಮಾಡಲಾಗಿದೆ.
ಮತ್ತೊಂದೆಡೆ, ಏ.೨೦ರಂದು ಹೊರನಾಡು ಕನ್ನಡಿಗರಿಗೆ ಪರೀಕ್ಷೆ ನಡೆಯಲಿದೆ. ಇದೇ ೨೦ರಂದು ಬೆಳಗಾವಿ, ಮಂಗಳೂರು ಮತ್ತು ಬೆಂಗಳೂರು ಕೇಂದ್ರಗಳಲ್ಲಿ ಹೊರನಾಡು ಮತ್ತು ಗಡಿನಾಡು ಕನ್ನಡ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಯಲಿದೆ. ಬೆಳಿಗ್ಗೆ ೧೧.೩೦ರಿಂದ ೧೨.೩೦ರವರೆಗೆ ಕನ್ನಡ ಪರೀಕ್ಷೆ ನಡೆಯಲಿದೆ. ಈ ಬಾರಿ ೧,೫೪೫ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯಲಿದ್ದಾರೆ.

ಮಾರ್ಗಸೂಚಿ ಏನಿದೆ.!

  • ನೀಲಿ ಅಥವಾ ಕಪ್ಪು ಬಣ್ಣದ ಪೆನ್ ಮಾತ್ರ ಬಳಸತಕ್ಕದ್ದು.
  • ಪ್ರವೇಶಪತ್ರ ಮತ್ತು ಗುರುತಿನ ಪತ್ರದೊಂದಿಗೆ ಬರುವುದು ಕಡ್ಡಾಯ.
  • ಓಎಂಆರ್ ಶೀಟ್‌ನ ಕೆಳಭಾಗದಲ್ಲಿ ಅಭ್ಯರ್ಥಿಗಳು ಮರೆಯದೆ ಸಹಿ ಮಾಡಬೇಕು.
  • ಓಎಂಆರ್ ಶೀಟ್‌ನಲ್ಲಿ ಪ್ರವೇಶಪತ್ರ ಸಂಖ್ಯೆ, ಪ್ರಶ್ನೆಪತ್ರಿಕೆಯ ವರ್ಶನ್ ಕೋಡ್ ನಮೂದಿಸುವುದು ಕಡ್ಡಾಯ.
  • ಓಎಂಆರ್ ಶೀಟ್‌ನಲ್ಲಿರುವ ಟೈಮಿಂಗ್ ಮಾರ್ಕ್ ಮೇಲೆ ಏನನ್ನೂ ಬರೆಯುವುದಾಗಲಿ, ಗೀಚುವುದಾಗಲಿ ಮಾಡಬೇಡಿ.
  • ತುಂಬು ತೋಳಿನ ಅಂಗಿ ಧರಿಸಿಕೊಂಡು ಬರುವಂತಿಲ್ಲ.
  • ಒಮ್ಮೆ ಉತ್ತರವನ್ನು ಗುರುತು ಮಾಡಿದ ಬಳಿಕ ಅದನ್ನು ಅಳಿಸಲು ಅವಕಾಶವಿರುವುದಿಲ್ಲ.
  • ಮೊಬೈಲ್, ಬ್ಲೂಟೂತ್, ಟ್ಯಾಬ್ಲೆಟ್, ಕೈಗಡಿಯಾರ, ಕ್ಯಾಲುಕುಲೇಟರ್, ನೋಟ್ ಪ್ಯಾಡ್, ಐ-ಪಾಡ್, ಇಯರ್ ಫೋನ್ ಇತ್ಯಾದಿಗಳನ್ನು ತರುವಂತಿಲ್ಲ.

ಈ ಬಾರಿ ದಾಖಲೆ ಮಟ್ಟದಲ್ಲಿ ಅಭ್ಯರ್ಥಿಗಳು..!
ಈ ಬಾರಿ ದಾಖಲೆಯ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆಯುತ್ತಿದ್ದು, ೨೦೨೪ರ ಕರ್ನಾಟಕ ಸಿಇಟಿ ಗೆ ದಾಖಲೆಯ ೩೪೯೬೩೭ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಸದ್ಯ ರಾಜ್ಯದಲ್ಲಿ ೭೩೭ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಬೆಂಗಳೂರಿನಲ್ಲಿಯೇ ೧೬೭ ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ.
೭೩೭ ವೀಕ್ಷಕರು, ೭೩೭ ವಿಶೇಷ ಜಾಗೃತ ದಳದ ಸದಸ್ಯರು ೭೩೭ ಪ್ರಶ್ನೆಪತ್ರಿಕಾ ಪಾಲಕರು, ೧೪೫೬೮ ಕೊಠಡಿ ಮೇಲ್ವಿಚಾರಕರು, ೨೦೩೦೦ ಅಧಿಕಾರಿ ವರ್ಗದವರ ನಿಯೋಜಿಸಲಾಗಿದೆ.