ಸಿಇಟಿ ಪರೀಕ್ಷೆ ಅಂತಿಮ ನಿರ್ಧಾರ ತಿಳಿಸಲು ಕೋರ್ಟ್ ಸೂಚನೆ

ಬೆಂಗಳೂರು, ಜು. ೨೮- ಕೊರೊನಾ ಸೋಂಕಿನ ನಡುವೆಯೂ ರಾಜ್ಯದಲ್ಲಿ ಈ ತಿಂಗಳ 30ರಂದು ನಡೆಸಲುದ್ದೇಶಿಸಿರುವ ಸಾಮಾನ್ಯ ಪ್ರವೇಶ ಪರೀಕ್ಷೆ-ಸಿಇಟಿ ಪರೀಕ್ಷೆಯನ್ನು ಪುನರ್ ಪರಿಶೀಲಿಸಿ ತಮ್ಮ ನಿರ್ಧಾರವನ್ನು ನಾಳೆ ಮಧ್ಯಾಹ್ನದೊಳಗೆ ತಿಳಿಸುವಂತೆ ಹೈಕೋರ್ಟ್ ರಾಜ್ಯಸರ್ಕಾರಕ್ಕೆ ಗಡುವು ನೀಡಿದೆ.
ಕೊರೊನಾ ಸೋಂಕಿನ ನಡುವೆಯೂ ಸಿಇಟಿ ಪರೀಕ್ಷೆಯನ್ನು ನಡೆಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೈಗೆತ್ತಿಕೊಂಡ ಮುಖ್ಯನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ನ್ಯಾಯಪೀಠ ರಾಜ್ಯಸರ್ಕಾರಕ್ಕೆ ತನ್ನ ನಿಲುವನ್ನು ತಿಳಿಸಲು ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ 5 ಸಾವಿರಕ್ಕೂ ಹೆಚ್ಚು ಕಂಟೈನ್ಮೆಂಟ್ ವಲಯಗಳಿವೆ. ಈ ವಲಯಗಳಲ್ಲಿರುವ ವಿದ್ಯಾರ್ಥಿಗಳು ಹೊರ ಬರುವಂತಿಲ್ಲ. ಹೀಗಿರುವಾಗ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೇಗೆ ಬರೆಯುತ್ತಾರೆ ಎಂದು ಸರ್ಕಾರವನ್ನು ಪ್ರಶ್ನಿಸಿದೆ.
ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯನ್ನು ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ.ಆದರೆ, ಸಿಇಟಿ ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ನಡೆಸಲು ಸಾಧ್ಯವಿದೆಯೇ? ಹೊರ ರಾಜ್ಯದ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದರಿಂದ ಈ ಸಂಬಂಧ ಸರ್ಕಾರದ ನಿರ್ಧಾರವನ್ನು ನಾಳೆ ಮಧ್ಯಾಹ್ನ 2.30ರ ವೇಳೆಗೆ ತಿಳಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ.
ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮಾರ್ಚ್, ಏಪ್ರಿಲ್‌ನಲ್ಲಿ ನಡೆಯಬೇಕಾಗಿದ್ದ ಸಿಇಟಿ ಪರೀಕ್ಷೆಯನ್ನು ರಾಜ್ಯಸರ್ಕಾರ ಜು.30 ಮತ್ತು 31 ರಂದು ಮರು ನಿಗದಿ ಮಾಡಿದೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ಪ್ರತಿದಿನ 5 ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂತಹ ಸಮಯದಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಿಇಟಿ ಪರೀಕ್ಷೆಯನ್ನು ನಡೆಸುವುದು ಸೂಕ್ತವಲ್ಲ, ಅದನ್ನು ಮುಂದೂಡಬೇಕು ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಯಿತು.
ಅರ್ಜಿಯ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎ.ಎಸ್ ಓಕಾ ನ್ಯಾಯಪೀಠ ಈ ಸೂಚನೆ ನೀಡಿದೆ.