ಸಿಇಟಿ ಗೊಂದಲ: ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಿ

ಕಲಬುರಗಿಏ,22: ಏಪ್ರಿಲ್ 18 ಹಾಗೂ 19 ರಂದು ಜರುಗಿದ ಸಿಇಟಿ ಪರೀಕ್ಷೆಯಲ್ಲಿ ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಿದ 3,49,637 ವಿದ್ಯಾರ್ಥಿಗಳು ತೀವ್ರ ಆತಂಕದಲ್ಲಿದ್ದಾರೆ. ಈ ಬಾರಿಯ ಪರೀಕ್ಷೆಯಲ್ಲಿ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ ಶಾಸ್ತ್ರ ಒಳಗೊಂಡಂತೆ ಸುಮಾರು 59 ಅಂಕಗಳಿಗೆ ಸಮನಾದ, ಪಠ್ಯಕ್ರಮದಿಂದ ಹೊರತಾದ ಪ್ರಶ್ನೆಗಳು ಪ್ರಶ್ನೆ ಪತ್ರಿಕೆಯಲ್ಲಿ ಬಂದಿವೆ. ಪಿಯು ಮಂಡಳಿ ನೀಡಿದ, ಪುನರಾವರ್ತಿತ ಪಠ್ಯಕ್ರಮವನ್ನು ಕಾಲೇಜುಗಳಲ್ಲಿ ಬೋಧಿಸಲಾಗಿದ್ದು, ವಿದ್ಯಾರ್ಥಿಗಳು ಆ ಪ್ರಶ್ನೆಗಳಿಗೆ ತಯಾರಾಗಿದ್ದಾರೆ. ಆದರೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿಇಟಿ ಪರೀಕ್ಷೆಯಲ್ಲಿ ಹಳೆಯ ಪಠ್ಯಕ್ರಮವನ್ನು ಆಧಾರವಾಗಿಟ್ಟುಕೊಂಡು, ಪ್ರಶ್ನೆ ಪತ್ರಿಕೆಯನ್ನು ತಯಾರಿಸಲಾಗಿದೆ. ಎರಡು ಮಂಡಳಿಗಳ ಘೋರ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿ ಸಮೂಹ ಅತಂತ್ರದಲ್ಲಿದೆ.ಆದ್ದರಿಂದ, ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಯನ್ನು ಗಮನದಲ್ಲಿರಿಸಿ, ಪಠ್ಯಕ್ರಮದಿಂದ ಹೊರತಾಗಿರುವ ಅಷ್ಟೂ ಪ್ರಶ್ನೆಗಳನ್ನು ನಗಣ್ಯವೆಂದು ಪರಿಗಣಿಸಿ ವಿದ್ಯಾರ್ಥಿಗಳಿಗೆ ರಾಂಕಿಂಗ್ ನೀಡಬೇಕೆಂದು ಮತ್ತು ರಾಜ್ಯ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಿ, ಈ ಅವಾಂತರಕ್ಕೆ ಕಾರಣರಾದವರಿಗೆ ಶಿಕ್ಷೆ ವಿಧಿಸಬೇಕೆಂದು ಎಐಡಿಎಸ್‍ಒ ಜಿಲ್ಲಾ ಕಾರ್ಯದರ್ಶಿ ತುಳಜರಾಮ್ ಎನ್. ಕೆ ಆಗ್ರಹಿಸಿದ್ದಾರೆ.