ಸಿಇಒ ಸೋಗಿನಲ್ಲಿ 28.70 ಲಕ್ಷ ವಂಚನೆ

ಬೆಂಗಳೂರು,ಜ.14- ಬಹುರಾಷ್ಟ್ರೀಯ ಕಂಪನಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ (ಸಿಇಒ) ಸೋಗಿನಲ್ಲಿ ಕೆಲಸ‌ ಕೊಡಿಸುವುದಾಗಿ ನಂಬಿಸಿ ಹಂತ ಹಂತವಾಗಿ 28.70 ಲಕ್ಷ ರೂಗಳನ್ನು ವಂಚಿಸಿರುವ ಪ್ರಕರಣ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕಳೆದ ತಿಂಗಳು ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಸ್ವರೂಪ್ ಶೆಟ್ಟಿ ವಿರುದ್ಧ ಕಿರಣ್ ಎಂಬುವರು ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಖಾಸಗಿ ಹೊಟೇಲ್​ನಲ್ಲಿ‌ ಕೆಲಸ ಮಾಡುತ್ತಿದ್ದ ಕಿರಣ್​ನಿಗೆ ಕಳೆದ‌‌ ವರ್ಷ ಮಾರ್ಚ್​ನಲ್ಲಿ ಸ್ವರೂಪ್ ಶೆಟ್ಟಿ ಪರಿಚಯವಾಗಿದ್ದ. ಈ ವೇಳೆ ಕಿರಣ್​ನ ಸಹೋದರನಿಗೆ ಕೆಲಸ ಕೊಡಿಸುವಂತೆ ನಿವೇದಿಸಿಕೊಂಡಿದ್ದ.
ತಾನು ಶ್ರೀಮಂತ ವ್ಯಕ್ತಿಯಾಗಿದ್ದು ಐಟಿ ಇಲಾಖೆ ದಾಳಿ ಮಾಡಿದ್ದು ಬ್ಯಾಂಕ್ ಅಕೌಂಟ್ ಜಪ್ತಿಯಾಗಿದೆ‌. ಅಲ್ಲದೆ ತಾನು ಎಂಎನ್​ಸಿ ಕಂಪೆನಿ ಸಿಇಒ‌ ಎಂದು ಸ್ವರೂಪ್ ಬಿಂಬಿಸಿಕೊಂಡಿದ್ದಾನೆ. ತನ್ನ ಸ್ನೇಹಿತನಿಗೆ ಹಣ ಸಹಾಯ ಮಾಡುವುದಾಗಿ ಮಾತು ಕೊಟ್ಟಿದ್ದೆ. ಆದರೆ ಐಟಿ ದಾಳಿಯಿಂದ ಹಣ ನೀಡಲು ಸಾಧ್ಯವಾಗುತ್ತಿಲ್ಲ‌‌‌ ಎಂದು ಹೇಳಿ ಮೊದಲ ಹಂತದಲ್ಲಿ ಸ್ನೇಹಿತನ ಅಕೌಂಟ್​ಗೆ 2.40 ಲಕ್ಷ ರೂ ಕಿರಣ್​ನಿಂದ ಸ್ವರೂಪ್ ಪಡೆದುಕೊಂಡಿದ್ದ. ಮತ್ತೊಂದು ಬಾರಿ 2.30 ಲಕ್ಷ ಹಾಕಿಸಿಕೊಂಡಿದ್ದಾನೆ.
ನಂತರ 9 ಲಕ್ಷ ಹಣವನ್ನು ಕಾಡುಗೋಡಿ ಬಸ್ ನಿಲ್ದಾಣದಲ್ಲಿ ಪಡೆದುಕೊಂಡಿದ್ದಾನೆ. ಇಷ್ಟಾದರೂ ತನ್ನ ತಂದೆಗೆ ಹಾರ್ಟ್ ಅಟ್ಯಾಕ್ ಆಗಿದ್ದು, ಹಣ ಬೇಕು 15 ಲಕ್ಷ ರೂ. ಹಣ ಅಕೌಂಟ್ ಮೂಲಕ ಪಡೆದಿದ್ದ. ಹಣ ಕೊಡದಿದ್ದರೆ ನಿನ್ನ ತಮ್ಮನಿಗೆ ಕೆಲಸ ಕೊಡಿಸುವುದಿಲ್ಲ ಅಂತ ಬ್ಲ್ಯಾಕ್ ಮೇಲ್ ಮಾಡಿ, ಹಂತ-ಹಂತವಾಗಿ 28.70 ಲಕ್ಷ ತೆಗೆದುಕೊಂಡು ವಂಚಿಸಿದ್ದಾನೆ.
ಈ ಹಿಂದೆ ಹಾವೇರಿ ಮೂಲದ ಅರ್ಷದ್ ಎಂಬ ಹುಡುಗನನ್ನು ಅಕ್ರಮ ಬಂಧನದಲ್ಲಿರಿಸಿಕೊಂಡು 48 ಲಕ್ಷ ರೂ. ಪಡೆದ ಪ್ರಕರಣಕ್ಕೆ ಸಂಬಂಧಿಸಿ ಕಾಡುಗೋಡಿ ಪೊಲೀಸರು ಈತನನ್ನು ಬಂಧಿಸಿದ್ದರು. ಸದ್ಯ ವಂಚನೆ ಪ್ರಕರಣ ಸಂಬಂಧ ಸ್ವರೂಪ್​ನನ್ನು ಪುಣೆ ಪೊಲೀಸರು ಬಾಡಿ ವಾರಂಟ್ ಮೂಲಕ ವಶಕ್ಕೆ ಪಡೆದಿದ್ದಾರೆ.