ಸಿಇಐಆರ್ ತಂತ್ರಾಂಶದಡಿ 31 ಮೊಬೈಲ್ ಪತ್ತೆ ಮಾಡಿ ವಾರಸುದಾರರಿಗೆ ಹಸ್ತಾಂತರ

ಕಲಬುರಗಿ,ಮಾ.27-ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳವಾದ, ಮರೆತು ಹೋದ ಮತ್ತು ಕಾಣೆಯಾದ 9.30 ಲಕ್ಷ ರೂ.ಮೌಲ್ಯದ 31 ಮೊಬೈಲ್‍ಗಳನ್ನು ಸಿಇಎನ್ ಅಪರಾಧ ವಿಭಾಗದ ಪೊಲೀಸರು ಕೇಂದ್ರ ಸರ್ಕಾರದ ದೂರ ಸಂಪರ್ಕ ಇಲಾಖೆ ಜಾರಿಗೆ ತಂದಿರುವ ಸೆಂಟ್ರಲ್ ಇಕ್ವಿಪ್‍ಮೆಂಟ್ ಐಡೆಂಟಿಟಿ ರಿಜಿಸ್ಟರ್ (ಸಿಇಐರ್) ತಂತ್ರಾಂಶದಡಿ ಪತ್ತೆ ಮಾಡಿದ್ದಾರೆ.
ಪತ್ತೆ ಮಾಡಿದ 31 ಮೊಬೈಲ್‍ಗಳನ್ನು ಎಸ್‍ಪಿ ಅಕ್ಷಯ್ ಹಾಕೆ ಅವರ ಮುಖಾಂತರ ಮಂಗಳವಾರ ಅವುಗಳ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಸಿಇಐಆರ್ ತಂತ್ರಾಂಶದಡಿ ಇದುವರೆಗೆ 275 ಮೊಬೈಲ್‍ಗಳನ್ನು ಪತ್ತೆ ಮಾಡಿ ಅವುಗಳ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದು ಎಸ್‍ಪಿ ಅಕ್ಷಯ್ ಹಾಕೆ ಇದೇ ವೇಳೆ ತಿಳಿಸಿದರು.
ಸಿಇಐಆರ್ ತಂತ್ರಾಂಶದಡಿ ಮೊಬೈಲ್ ಪತ್ತೆ ಮಾಡಿದ ಸಿಇಎನ್ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪ್ರಭಾರಿ ಪೊಲೀಸ್ ನಿರೀಕ್ಷಕ ಶಿವಶಂಕರ ಸಾಹು, ಪಿಎಸ್‍ಐ ಕಿರಣ್, ಸಿಬ್ಬಂದಿಗಳಾದ ಅಶೋಕ, ಸಿದ್ದಪ್ಪ ಪಾಟೀಲ, ಉಮೇಶ್ ಅವರ ಸೇವೆಂiÀiನ್ನು ಅವರು ಶ್ಲಾಘಿಸಿದರು.
ವಾಹನ ಹತ್ತುವಾಗ, ಇಳಿಯುವಾಗ, ಪ್ರಯಾಣದ ಸಮಯದಲ್ಲಿ ಮತ್ತು ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್‍ಗಳ ಬಗ್ಗೆ ಜಾಗೃತೆ ವಹಿಸಬೇಕು ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.