ಸಿಆರ್‌ಪಿಎಫ್ ನೇಮಕಾತಿ ಕನ್ನಡಿಗರಿಗೆ ಉಂಡೆನಾಮ

ಬೆಂಗಳೂರು, ಏ. ೧೧- ಸಿಆರ್‌ಪಿಎಫ್ ನೇಮಕಾತಿ ಪರೀಕ್ಷೆಯಲ್ಲಿ ಕನ್ನಡಕ್ಕೆ ಅವಕಾಶ ನೀಡದೆ ಕೇಂದ್ರದ ಬಿಜೆಪಿ ಸರ್ಕಾರ ಕನ್ನಡಿಗರಿಗೆ ಮತ್ತೊಂದು ಉಂಡೆ ನಾಮ ಹಾಕಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನಿನ್ನೆ ನಡೆದ ಕೇಂದ್ರೀಯ ಮೀಸಲು ಪಡೆ (ಸಿಆರ್‌ಪಿಎಫ್) ನೇಮಕದ ಕಂಪ್ಯೂಟರ್ ಪರೀಕ್ಷೆಯಲ್ಲಿ ಕನ್ನಡಕ್ಕೆ ಅವಕಾಶವನ್ನೆ ಕೊಟ್ಟಿಲ್ಲ. ಹಿಂದಿ, ಇಂಗ್ಲೀಷ್ ಭಾಷೆಗಷ್ಟೆ ಪರೀಕ್ಷೆಗೆ ಅವಕಾಶ ಕೊಡಲಾಗಿದೆ. ಇದು ಖಂಡನೀಯ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ತನ್ನ ವ್ಯಾಪ್ತಿಯಲ್ಲಿ ನಡೆಸುವ ಎಲ್ಲ ಪರೀಕ್ಷೆಗಳನ್ನು ಹಿಂದಿ, ಇಂಗ್ಲೀಷ್‌ನಲ್ಲೆ ನಡೆಸುತ್ತಿದೆ. ಇದು ಇತರೆ ಭಾಷಿಕರಿಗೆ ಉದ್ಯೋಗ ವಂಚಿತರನ್ನಾಗಿಸುವ ಹುನ್ನಾರ. ಜತೆಗೆ ಹಿಂದಿ ಹೇರಿಕೆ ಮಾಡುವ ದುರುದ್ದೇಶ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲೂ ಉದ್ಯೋಗ ಪಡೆಯಲು ಅನ್ಯ ಭಾಷೆಯಲ್ಲಿ ಪರೀಕ್ಷೆ ಬರೆಯಬೇಕಾದ ಧರ್ಮ ದಕ್ಷಿಣ ಭಾರತದ ರಾಜ್ಯಗಳದ್ದಾಗಿದೆ. ಕನ್ನಡ ಭಾಷೆಗೆ ಅವಕಾಶ ನೀಡದೆ ಸಿಆರ್‌ಪಿಎಫ್ ನೇಮಕಾತಿಯ ಮರು ಪರೀಕ್ಷೆ ನಡೆಸಬೇಕು. ಇಲ್ಲದಿದ್ದರೆ ದೊಡ್ಡ ಹೋರಾಟ ನಡೆಸುವುದಾಗಿಯೂ ಅವರು ಎಚ್ಚರಿಕೆ ನೀಡಿದ್ದಾರೆ.