ಸಿಂಪಿ ಸೇವೆ ಅವರ್ಣನೀಯ

ಕಲಬುರಗಿ,ಜು.3-ಹೈದರಾಬಾದ ಕರ್ನಾಟಕದಲ್ಲಿ ಸಾಹಿತ್ಯಕ-ಸಾಂಸ್ಕøತಿಕ ಬೆಳವಣಿಗೆಗೆ ವೀರಭದ್ರ ಸಿಂಪಿ ಅವರ ಕಾರ್ಯ ಮತ್ತು ಶೈಲಿ ಅವರ್ಣನೀಯವಾಗಿದೆ ಎಂದು ನ್ಯಾಯವಾದಿ ರಘೋಜಿ ಅಂಕಲಕರ್ ಅವರು ಹೇಳಿದರು.
ಅವರು ಶನಿವಾರ ನಗರದ ಕಾಕಡೆ ಚೌಕ, ಲಂಗುರ ಹನುಮಾನ ಮಂದಿರದ ಹತ್ತಿರದ ಭಾಗ್ಯಜ್ಯೋತಿ ಚಾರಿಟೇಬಲ್ ಟ್ರಸ್ಟನಲ್ಲಿ ಏರ್ಪಡಿಸಿದ್ದ ವೀರಭದ್ರ ಸಿಂಪಿ ಅವರ 64ನೇ ಜನ್ಮ ದಿನ ಆಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತ ಈ ಭಾಗದಲ್ಲಿ 1988ರ ಕಾಲಘಟ್ಟದಲ್ಲಿ ಉದಯೂನ್ಮಖ ಯುವಬರಹಗಾರರ ಬಳಗವನ್ನು ಕಟ್ಟಿ ಯುವ ಪ್ರತಿಭೆಗಳನ್ನು ಬೆಳಕಿಗೆ ತರುವ ಕೆಲಸ ಮಾಡಿದ್ದಾರೆ. ಶಿವಶರಣ ಪಾಟೀಲ ಜಾವಳಿ ಅವರು ಕಟ್ಟಿಸಿ ಆಶ್ರಯ ಮಾಡಿಟ್ಟಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಗೆ ಕನ್ನಡ ಭವನ ಎಂದು ಹೆಸರಿಸುವ ಮೂಲಕ ಪರಿಷತ್ತಿನ ಸುಧೀರ್ಘ ಕಾಲಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಅದರ ಬೆಳವಣಿಗೆಯಿಂದ ಇಂದು ಜನ ಸಾಮಾನ್ಯರಿಗೂ ಕನ್ನಡ ಭವನ ಪರಿಚಿತಗೊಳಿಸಿ ನಾಡಿಗೆ ಮಾದರಿಯವಾಗಿಸಿದ್ದಾರೆ. ಪರಿಷತ್ತಿನ ಆವರಣ, ಬಾಪುಗೌಡ ದರ್ಶಪೂರ ರಂಗ ಮಂದಿರ, ಸುವರ್ಣ ಸಭಾ ಭವನ, ಸೌಂದರ್ಯೀಕರಣ ಮತ್ತು ಪರಿಷತ್ತಿಗೆ ಅಗತ್ಯವಾಗಿದ್ದ ಸಾಮಗ್ರಿಗಳಿಗಾಗಿ ಅನೇಕ ದಾನಿಗಳ ಮನೆಗಳಿಗೆ ಹೋಗಿ ಕಾಡಿ, ಬೇಡಿ ತಂದು ಬೆಳೆಸಿದ ವೀರಭದ್ರ ಸಿಂಪಿ ಅವರ ಸಾಧನೆ, ಇದರ ಹಿಂದಿನ ಪರಿಶ್ರಮ ಈ ಭಾಗದ ಇಂದಿನ ಮತ್ತು ಮುಂದಿನ ಜನಾಂಗಕ್ಕೆ ಮಾದರಿಯಾಗಿದೆ ಎಂದರು.
ಭಾಗ್ಯಜ್ಯೋತಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಗಂಗಮ್ಮ ರೇವಣಸಿದ್ಧ ಗೋರೆಗೊಳ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಒಂದು ಸಂಘ-ಸಂಸ್ಥೆ ಕಟ್ಟುವುದು ಸುಲಭ. ಆದರೆ ಅದನ್ನು ನಿರ್ವಹಿಸಿ, ಬೆಳಸುವದು ಕಷ್ಟವಾದದ್ದು. ನಾಲ್ಕು ವರ್ಷದಲ್ಲಿ ನಾನು ಬಹಳಷ್ಟು ಅನುಭವಿಸಿದ್ದೇನೆ. ವೀರಭದ್ರ ಸಿಂಪಿ ಅವರು ನಲವತ್ತು ಮೂರು ವರ್ಷ ಅನುಭವ ನಮಗೆ ಪ್ರೇರಣೆ ಯಾಗಲಿದೆ. ಇದಕ್ಕೆ ಸಹಾಯ, ಸಹಕಾರಿಗಳು ಸಿಕ್ಕರೆ ಇನ್ನಷ್ಟು ಉತ್ತಮ ಕೆಲಸ ಮಾಡಲು ಸಾಧ್ಯವಾಗಲಿದೆ ಎಂದರು.
ದೌಲತರಾಯ ಮಾಲಿ ಪಾಟೀಲ ಸ್ವಾಗತಿಸಿದರು, ವೃದ್ಧ ಮತ್ತು ನಿರ್ಗತಿಕರನ್ನು ಕರೆದುಕೊಂಡು ಸಾಲು ಪಂಕ್ತಿಯಲ್ಲಿ ಎಲ್ಲರು ಸಹ ಭೋಜನ ಮಾಡಿದರು. ವೀರಭದ್ರ ಸಿಂಪಿ ಅವರಿಗೆ ಟ್ರಸ್ಟೀಸ್ ಅಧ್ಯಕ್ಷರಾದ ಗಂಗಮ್ಮ ಅವರು ಶಾಲು ಹೊದಿಸಿ ಸನ್ಮಾನಿಸಿದರು. ಅಣವೀರ ಹಂಡಿ, ಸಿದ್ರಾಮಯ್ಯ ಹಿರೇಮಠ, ಶಿವಕುಮಾರ ಹುಜರತ್ತಿ ಅತಿಥಿಗಳಾಗಿ ಆಗಮಿಸಿದ್ದರು, ಸುಜಾತಾ ಪುಜಾರಿ, ಗಂಗು ಕೋಕಾಟೆ ಅಚ್ಚುಕಟ್ಟಾಗಿ ಕಾರ್ಯಕ್ರಮ ಸಂಯೊಜಿಸಿದರು. ವೃದ್ಧಾಶ್ರಮದ ಆಶ್ರಿತರು, ಓಣಿ ನಾಗರಿಕರು ಪಾಲ್ಗೊಂಡಿದ್ದರು.