ಸಿಂಪಿ ಸಾಹಿತ್ಯ ಸೇವೆ ಶ್ಲಾಘನೀಯ:ಡಾ.ಸಾರಂಗಧರ ಶ್ರೀ

ಕಲಬುರಗಿ,ನ.1-“ಉದಯೋನ್ಮುಖ ಬರಹಗಾರರ ಬಳಗ ಸ್ಥಾಪಿಸುವುದರ ಮೂಲಕ ಸಾಹಿತ್ಯ ವಲಯದಲ್ಲಿ ಸಂಚಲನ ಮೂಡಿಸಿದ ವೀರಭದ್ರ ಸಿಂಪಿ ಅವರು ಸಾಹಿತಿಯಾಗಿ, ಸಾಹಿತ್ಯ ಸಂಘಟಕರಾಗಿ ಮಾಡಿದ ಸೇವೆ ಅತ್ಯಂತ ಶ್ಲಾಘನೀಯವಾದುದ್ದಾಗಿದೆ ಎಂದು ಶ್ರೀಶೈಲಂ ಸಾರಂಗ ಮಠ ಹಾಗೂ ಸುಲಫಲ ಮಠದ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಹೇಳಿದರು.
ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿಂದು ಉದಯೋನ್ಮುಖ ಬರಹಗಾರರ ಬಳಗ ಕೇಂದ್ರ ಸಮಿತಿ ವತಿಯಿಂದ ಸಾಹಿತ್ಯ ಸೇವಕ ವೀರಭದ್ರ ಸಿಂಪಿ ಅವರಿಗೆ 60 ಸಂಘಟನೆಗೆ 40 ವರ್ಷ (1980-2020 ರವರೆಗೆ) ಕಾರ್ಯ ಸಾಧನೆಗಳ ಪರಿಚಯ ಕೃತಿ ಬಿಡುಗಡೆ ಸಮಾರಂಭದಲ್ಲಿ ಕೃತಿ ಬಿಡುಗಡೆ ಮಾಡಿ ಮಾತನಾಡುತ್ತಿದ್ದ ಅವರು, ಸಿಂಪಿ ಅವರಲ್ಲಿನ ಸಾಹಿತ್ಯ ಆಸಕ್ತಿಯೇ ಅವರು ಉದಯೋನ್ಮುಖ ಬರಹಗಾರರ ಬಳಗ ಸ್ಥಾಪನೆಗೆ ಕಾರಣವಾಯಿತು. ಆ ಮೂಲಕ ಸಾಹಿತ್ಯ ವಲಯದಲ್ಲಿ ತಾವೊಬ್ಬರೇ ಅಲ್ಲ ಇತರರನ್ನು ಬೆಳೆಸುವುದರ ಮೂಲಕ ಸಾಹಿತ್ಯ ಲೋಕಕ್ಕೆ ಅಮೂಲ್ಯವಾದ ಕೊಡಗೆ ನೀಡಿದ್ದಾರೆ ಎಂದರು. ಸಿಂಪಿ ಕೇವಲ ಸಾಹಿತಿ ಮಾತ್ರವಲ್ಲ ಉತ್ತಮ ಸಂಘಟಕರೂ ಹೌದು. ಅವರ ಸಂಘಟನ ಚತುರತೆಯೇ ಅವರನ್ನು ಮೂರುಬಾರಿ ಸಾಹಿತ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರನ್ನಾಗಿ ಆಯ್ಕೆಯಾಗಲು ಕಾರಣವಾಯಿತು. ಅವರ ಅವಧಿಯಲ್ಲಿಯೇ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕಲಬುರಗಿಯಲ್ಲಿ ನಡೆದಿದ್ದು ಅವಿಸ್ಮರಣಿವಾದದ್ದು, ಸಿಂಪಿ ಅವರಲ್ಲಿನ ಸಂಘಟನೆ ಗುಣ ಬೇರೊಬ್ಬರಲ್ಲಿ ಕಾಣಲು ಆಗದು ಎಂದರು.
ಸಮಾರಂಭದ ನೇತೃತ್ವವಹಿಸಿದ್ದ ಸೊನ್ನ ಸಿದ್ಧಲಿಂಗೇಶ್ವರ ದಾಸೋಹ ವಿರಕ್ತಮಠದ ಡಾ.ಶಿವಾನಂದ ಮಹಾಸ್ವಾಮಿಗಳು ಮಾತನಾಡಿ, ಮಾಜಿ ಮುಖ್ಯಮಂತ್ರಿ ದಿ.ಎನ್.ಧರ್ಮಸಿಂಗ್ ಅವರ ದೆಸೆಯಿಂದ ಜೇವರ್ಗಿ ತಾಲ್ಲೂಕಿನ ನೆಲೋಗಿ ಗ್ರಾಮದ ಹೆಸರು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಿಂಚಿತು. ಸಿಂಪಿ ಅವರ ದೆಸೆಯಿಂದ ಇಡೀ ಕರ್ನಾಟಕದಾದ್ಯಂತ ನೆಲೋಗಿ ಹೆಸರು ಮನೆಮಾತಾದಂತಾಗಿದೆ. ರಾಜಕೀಯ ವಲಯದಲ್ಲಿ ಧರ್ಮಸಿಂಗ್ ಅವರು ಹೆಸರು ಮಾಡಿದರೆ, ಸಿಂಪಿ ಅವರು ಸಾಹಿತ್ಯ ವಲಯದಲ್ಲಿ ಹೆಸರು ಮಾಡಿದ್ದಾರೆ. ಸಿಂಪಿ ಅವರ ಸೇವೆ ಶ್ಲಾಘನೀಯವಾದುದ್ದಾಗಿದೆ ಎಂದರು.
ದೈಹಿಕ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಪ್ರೊ.ಮಲ್ಕಣಗೌಡ (ಮಲ್ಲಿಕಾರ್ಜುನ) ಪಾಟೀಲ ನೆಲೋಗಿ, ವೀರಭದ್ರ ಸಿಂಪಿ ಅವರ ಧರ್ಮಪತ್ನಿ ನಿರ್ಮಲಾ ವಿ.ಸಿಂಪಿ, ಉದಯೋನ್ಮುಖ ಬರಹಗಾರರ ಬಳಗದ ಗೌರವಾಧ್ಯಕ್ಷ ಡಾ.ಸೂರ್ಯಕಾಂತ ಪಾಟೀಲ, ಖಜಾಂಚಿ ಸಿದ್ದರಾಮಯ್ಯ ಹಿರೇಮಠ, ಪ್ರಧಾನ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ ವೇದಿಕೆ ಮೇಲಿದ್ದರು. ಬಳಗದ ಅಧ್ಯಕ್ಷ ಡಾ.ಪ್ರೇಮಚಂದ ಚವ್ಹಾಣ ಅಧ್ಯಕ್ಷತೆ ವಹಿಸಿದ್ದರು. ದೌಲತರಾಯ ಮಾಲಿಪಾಟೀಲ ಸ್ವಾಗತಿಸಿದರು. ಬಳಗದ ಸದಸ್ಯರು, ಸಿಂಪಿ ಅಭಿಮಾನಿಗಳು ಮತ್ತವರ ಕುಟುಂಬವರ್ಗದವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.