ಸಿಂಧೂರಿ ವರ್ಗಾವಣೆ ಪರಿಶೀಲನೆ ಸಿಎಂ ನಕಾರ

ಬೆಂಗಳೂರು,ಜೂ.೬- ಒಂದು ಸಲ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ಮೇಲೆ ಮತ್ತೆ ಅದನ್ನು ಮರು ಪರಿಶೀಲಿಸುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳುವ ಮೂಲಕ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವರ್ಗಾವಣೆಯನ್ನು ಪುನರ್ ಪರಿಶೀಲಿಸಲಾಗುತ್ತದೆ ಎಂಬ ವರದಿಗಳನ್ನು ತಳ್ಳಿ ಹಾಕಿದ್ದಾರೆ.
ಮೈಸೂರು ಜಿಲ್ಲಾಧಿಕಾರಿ ಹುದ್ದೆಯಿಂದ ವರ್ಗಾವಣೆಗೊಂಡಿರುವ ರೋಹಿಣಿ ಸಿಂಧೂರಿ ಅವರು ಇಂದು ತಮ್ಮನ್ನು ಭೇಟಿ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ವರ್ಗಾವಣೆ ಹಿನ್ನೆಲೆಯಲ್ಲಿ ರೋಹಿಣಿ ಸಿಂಧೂರಿ ತಮ್ಮನ್ನು ಭೇಟಿ ಮಾಡಿದ್ದರು. ಒಂದು ಬಾರಿ ವರ್ಗಾವಣೆ ಮಾಡಿದ ಮೇಲೆ ಅದನ್ನು ಮರು ಪರಿಶೀಲಿಸುವ ಪ್ರಶ್ನೆಯೇ ಇಲ್ಲ. ವರ್ಗಾವಣೆ ಆದ ಹುದ್ದೆಗೆ ವರದಿ ಮಾಡಿಕೊಳ್ಳುವಂತೆ ಸೂಚಿಸಿದ್ದೇನೆ ಎಂದರು.
ರಾಜ್ಯದ ಮಾಜಿ ಮುಖ್ಯಮಂತ್ರಿ ದಿ. ದೇವರಾಜು ಅರಸುರವರ ೩೯ನೇ ಪುಣ್ಯತಿಥಿ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ ಸಾಮಾನ್ಯರ ಬಗ್ಗೆ ಅರಸುರವರಿಗಿದ್ದ ಕಾಳಜಿ, ದೂರದೃಷ್ಟಿ ಆಡಳಿತದ ನಿರ್ಧಾರಗಳು ರಾಜ್ಯದಲ್ಲಿ ಕ್ರಾಂತಿಗೆ ಕಾರಣವಾದವು, ಸತತ ೮ ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ದೇಶದ ರಾಜಕೀಯದಲ್ಲಿ ಮೌನಕ್ರಾಂತಿಗೆ ಕಾರಣರಾದ ಅರಸುರವರ ಆಡಳಿತ ಫಲವನ್ನು ಅರಸು ಯುಗ ಎಂದೇ ಕರೆಯಲಾಗುತ್ತದೆ ಎಂದರು.
ಊಳುವವನೇ ಭೂ ಒಡೆಯ ಎಂಬ ಕಾನೂನನ್ನು ಜಾರಿಗೆ ತಂದು ದುರ್ಬಲ ವರ್ಗದವರಲ್ಲಿ, ಹಿಂದುಳಿದವರಲ್ಲಿ ಒಂದು ಶಕ್ತಿ ತುಂಬಿದವರು ಅರಸುರವರು, ಅನಿಷ್ಟ ಪದ್ಧತಿಗಳಾದ ಜೀತ ಪದ್ಧತಿ ಮತ್ತು ತಲೆ ಮೇಲೆ ಮಲ ಹೊರುವ ಪದ್ಧತಿಗಳಿಗೆ ಅಂತ್ಯ ಹಾಡಿದ ಅರಸುರವರು ರಾಜ್ಯದ ಅಭಿವೃದ್ಧಿಯಲ್ಲಿ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಖೋಟಾ ಶ್ರೀನಿವಾಸ ಪೂಜಾರಿ,ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಮತ್ತಿತರರಿದ್ದರು.